

ಸೊರಬ: ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣದ ಮೂಲಕ ಕಲಿಕೆಗೆ ಪ್ರೇರಣೆ ನೀಡಿದಾಗ ಸಹಜವಾಗಿ ವಿದ್ಯಾರ್ಥಿಗಳೂ ಪ್ರತಿಭಾವಂತರಾಗಿ ಬೆಳೆಯಲು ಸಾಧ್ಯವಿದೆ ಎಂದು ಗ್ರಾಪಂ ಸದಸ್ಯ ಪರಶುರಾಮ್ ಹೇಳಿದರು.
ಶುಕ್ರವಾರ ತಾಲೂಕಿನ ಉಳವಿ ಹೋಬಳಿ ವ್ಯಾಪ್ತಿಯ ಮಳಲಗದ್ದೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ವಿಶೇಷವಾಗಿ ಸಾಂಸ್ಕೃತಿಕವಾಗಿ ಬೆಳೆಯಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಪ್ರತಿ ಮಗುವೂ ನಾಯಕತ್ವ ರೂಢಿಸಿಕೊಳಲು ಶಿಕ್ಷಕರು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
ನಿವೃತ್ತ ಸಹ ಪ್ರಾಧ್ಯಾಪಕ ಡಾ. ಶ್ಯಾಮಸುಂದರ್ ಮಾತನಾಡಿ, ಕೇವಲ ಶಿಕ್ಷಣದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸಾಂಸ್ಕೃತಿಕ ಹಾಗೂ ಸಾಹಿತ್ಯಾತ್ಮಕ ವಿಚಾರಗಳ ಜತೆ ಕಾಲಕ್ಕೆ ಅನುಗುಣವಾಗಿ ತಾಂತ್ರಿಕವಾಗಿ ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯ ಎಂದರು. ಕನಸಿನ ಜತೆ ಸ್ಪಷ್ಟವಾದ ಧ್ಯೇಯ ವಿದ್ಯಾರ್ಥಿ ದಿಸೆಯಲ್ಲಿಯೇ ಮೈಗೂಡಿಸಿಕೊಂಡರೆ ಬದಲಾಗುತ್ತಿರುವ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯ. ಸೃಜನಶೀಲತೆ ಮತ್ತು ಹೃದಯವಂತಿಕೆ ಮೌಲ್ಯವನ್ನು ಸೃಷ್ಟಿ ಮಾಡುವಂತಿರಬೇಕೇ ಹೊರತು ಹಣದಿಂದಲೇ ಸಂಬAಧ ಹೆಚ್ಚಾಗಬಲ್ಲದು ಎಂಬ ನಂಬಿಕೆ ಸುಳ್ಳು. ಮಕ್ಕಳು ಇಂದು ಮೊಬೈಲ್ ಬಳಕೆಯನ್ನೇ ಹವ್ಯಾಸವಾಗಿ ರೂಢಿಸಿಕೊಳ್ಳುತ್ತಿದ್ದಾರೆ. ಮಕ್ಕಳ ಚಲನವಲನ ಬಗ್ಗೆ ಪಾಲಕರು, ಶಿಕ್ಷಕರು ಗಮನಿಸಬೇಕು ಎಂದರು
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಕಾಂತ್ ಅಧ್ಯಕ್ಷತೆ ವಹಿಸಿ ಮಾನಾಡಿದರು. ಉಳವಿ ಗ್ರಾಪಂ ಅಧ್ಯಕ್ಷೆ ಪ್ರೇಮಾ, ಸದಸ್ಯರಾದ ತನ್ವೀರ್ ಅಹಮದ್, ಬಾಬು, ರೇಖಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ, ಎಂ.ಎಸ್.ಸವಿತಾ, ಮಂಜಪ್ಪ, ಮುಖ್ಯ ಶಿಕ್ಷಕಿ ಸವಿತಾ, ಸಹ ಶಿಕ್ಷಕರಾದ ಹೇಮಾವತಿ, ಶಹೀನಾ, ಲಲಿತಾ, ಕೃಷ್ಣಪ್ಪ, ಧರ್ಮಪ್ಪ, ಕಸಾಪ ಅಧ್ಯಕ್ಷ ಶಿವಾನಂದ ಪಾಣಿ ಇದ್ದರು.