ಪ್ರಗತಿಪರ ಜೇನು ಕೃಷಿಕರ ಸಂಘದಲ್ಲಿ ಅವ್ಯವಹಾರ ನಡೆದಿಲ್ಲ; ತನಿಖೆಗೆ ಸಂಪೂರ್ಣ ಸಹಕಾರ: ಸತೀಶ್ ಕುಮಾರ್ ಜೋಯಪ್ಪ

Z SAHAKARA SANGHA
Published on

ಮಡಿಕೇರಿ: ಭಾಗಮಂಡಲದ ಪ್ರಗತಿಪರ ಜೇನು ಕೃಷಿಕರ ಸಂಘದಲ್ಲಿ ಯಾವುದೇ ಅವ್ಯವಹಾರ, ಹಣದುರೂಪಯೋಗ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಜೋಯಪ್ಪ, ಸಂಘದ ಹೆಸರು ಹಾಳು ಮಾಡುವ ಉದ್ದೇಶದಿಂದ ಆರೋಪ ಮಾಡಿದ್ದಾರೆ ಎಂದು ದೂರಿದರು.


ಸಂಘದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಮಾಡಿರುವ ಆರೋಪ ರಾಜಕೀಯ ದುರುದ್ದೇಶದಿಂದ ಕೂಡಿದೆ. ಸಧ್ಯದಲ್ಲೇ ಸಂಘದ ಚುನಾವಣೆ ನಡೆಯಲಿರುವ ಕಾರಣ ಇಲ್ಲಸಲ್ಲದ ಹೇಳಿಕೆ ನೀಡಿ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ನಡೆಸುತ್ತಿರುವ ಜೇನು ಖರೀದಿ ಮತ್ತು ಮಾರಾಟ ವ್ಯವಹಾರ ದಾಖಲೆ ಸಹಿತ ಪಾರದರ್ಶಕವಾಗಿದೆ. ಯಾವುದೇ ತನಿಖೆ ನಡೆದರೂ ಸಂಪೂರ್ಣ ಸಹಕಾರ ನೀಡಲು ಸಿದ್ಧ ಎಂದು ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ದೂರು ನೀಡಿರುವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಇವರು ೧೯೯೩ ರಿಂದ ೨೦೦೧ ರವರೆಗೆ ಇದೇ ಸಹಕಾರ ಸಂಘದಲ್ಲಿ ಅಧಿಕಾರ ವರ್ಗದ ನಿರ್ದೇಶಕರಾಗಿದ್ದರು. ನಿವೃತ್ತಿಯಾದ ನಂತರ ಭಾಗಮಂಡಲದಲ್ಲಿ ಅಂಗಡಿ ಮಳಿಗೆ ನಡೆಸುತ್ತಿರುವ ಇವರು ಕೊಡಗಿನ ಶುದ್ಧ ಜೇನನ್ನೇ ಮಾರಾಟ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಸಂಘದ ವಿರುದ್ಧ ದೂರು ನೀಡಿದವರು ಇದೇ ಸಂಘದಿಂದ ೨೦೨೨ ಜನವರಿ ೬ ಕ್ಕೆ ೧೦ ಕೆಜಿ ಜೇನು ಖರೀದಿಸಿದ್ದಾರೆ. ಸಂಘದ ವಿರುದ್ಧದ ಆರೋಪ ಪ್ರಕರಣದಲ್ಲಿ ಶಾಸಕರನ್ನು ಎಳೆದು ತಂದಿರುವುದು ಖಂಡನೀಯ. ಶಾಸಕರಿಗೂ, ಸಂಘದ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ವಿನಾಕಾರಣ ಕಾಂಗ್ರೆಸ್ಸಿಗರು ಆರೋಪ ಮಾಡಿರುವುದು ಸರಿಯಾದ ಕ್ರಮವಲ್ಲ. ನಮ್ಮ ಬಳಿ ಎಲ್ಲಾ ದಾಖಲೆಗಳಿವೆ. ಯಾರೇ ತನಿಖೆ ನಡೆಸಿದರೂ ಸಂಪೂರ್ಣ ಸಹಕಾರ ಮತ್ತು ದಾಖಲೆ ಪರಿಶೀಲನೆಗೂ ಅವಕಾಶ ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.


ಕೊಡಗು ಜಿಲ್ಲೆಯಲ್ಲಿ ರೋಗಬಾಧೆಯಿಂದ ಜೇನು ಕೃಷಿ ಹಿನ್ನಡೆ ಅನುಭವಿಸಿದಾಗ ಹೊರಗಿನಿಂದ ಜೇನು ಖರೀದಿಸುವ ಕುರಿತು ೧೯೯೨-೯೩ ರ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಂದಿನಿಂದ ಜೇನು ಖರೀದಿ ವ್ಯವಹಾರ ಇದೇ ರೀತಿಯಾಗಿ ನಡೆದುಕೊಂಡು ಬಂದಿದೆ ಎಂದರು.


ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿಠಲ, ನಿರ್ದೇಶಕರುಗಳಾದ ಅರಗದ ದಿನೇಶ್, ಪಾಣತ್ತಲೆ ಲೋಕನಾಥ್, ಉದಯ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಸುಧಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net