ಮೀನುಗಾರರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

Pradhan Mantri Matsya Sampad Yojane Meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 30 ಸಾವಿರ ಟನ್ ಮೀನು ಉತ್ಪಾದನೆಯಾಗುತ್ತಿದೆ. ಆದ್ದರಿಂದ ಉತ್ತಮ ಮಾರುಕಟ್ಟೆ ನಿರ್ಮಿಸಿ ಮೀನುಗಾರರನ್ನು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2025-26ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಲಾಖೆಯ 177 ಕೆರೆ ಹಾಗೂ ಗ್ರಾಮ ಪಂಚಾಯಿತಿಯ 688 ಕೆರೆ ಸೇರಿದಂತೆ ಒಟ್ಟು 865 ಕೆರೆ ಹಾಗೂ 26 ನದಿ ಭಾಗ ಮತ್ತು 4 ಜಲಾಶಯಗಳಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

2024-25ನೇ ಸಾಲಿನ 306 ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಜಿಲ್ಲೆಯಲ್ಲಿ 47 ಮೀನುಗಾರರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, 45 ಸಾವಿರಕ್ಕೂ ಹೆಚ್ಚಿನ ಮೀನುಗಾರರಿದ್ದಾರೆ. ಇವರಿಗೆ ಮೀನುಗಾರಿಕೆ ಕುರಿತು ಹೆಚ್ಚಿನ ತರಬೇತಿ ನೀಡಬೇಕು. ಪಿ.ಎಂ.ಎಂ.ಎಸ್.ವೈ ಯೋಜನೆಯಡಿ ಕಳೆದ ಐದು ವರ್ಷದಿಂದ 742 ಫಲಾನುಭವಿಗಳಿದ್ದಾರೆ. ಈವರೆಗೆ ಪಿ.ಎಂ.ಎಂ.ಎಸ್.ವೈ ಯೋಜನೆಯಡಿ 150 ಫಲಾನುಭವಿಗೆ ಸುಮಾರು 513.38 ಲಕ್ಷ ರೂ ಸಹಾಯಧನ ನೀಡಲಾಗಿದೆ ಎಂದರು. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 2024-25 ನೆ ಸಾಲಿನಲ್ಲಿ 224.21 ಲಕ್ಷ ಸಹಾಯಧನ ನೀಡಲಾಗಿದೆ. ಅನುದಾನ ಪಡೆದವರು ಸಮರ್ಪಕವಾಗಿ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರಾ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಅಂತೆಯೇ ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡುವವರಿಗೆ ಪ್ರೋತ್ಸಾಹ ನೀಡಿ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಸಹಾಯಧನ ಪಡೆದ ಮೀನುಗಾರರಿಗೆ ಮೀನು ಸಾಕಾಣಿಕೆಯ ಕುರಿತು ತರಬೇತಿ ನೀಡಿ. ಫಲಾನುಭವಿಗಳು ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಮೆಲ್ವಿಚಾರಣೆ ನಡೆಸಿ ಯಾವುದೇ ಕಾರಣಕ್ಕೂ ಫಲಾನುಭವಿಗಳು ಸಹಾಯಧನವನ್ನು ದುರುಪಯೋಗಮಾಡಿಕೊಳ್ಳದಂತೆ ಕ್ರಮವಹಿಸಿ.

ಸಭೆಯಲ್ಲಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಾಬಾ ಸಾಬ್, ಸಹಾಯಕ ನಿರ್ದೇಶಕರಾದ ಕೆ.ಎಂ.ಲೋಕೇಶ್, ಮಹದೇವ ಸ್ವಾಮಿ, ಟಿ.ಡಿ.ಜಗದೀಶ್, ಪುಷ್ಪಲತಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್, ಪ್ರಗತಿಪರ ರೈತ ಸಿ.ಎನ್.ಸುರೇಶ್ ಇತರರಿದ್ದರು.

ಇದೇ ವೇಳೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕಳೆದ ಐದು ವರ್ಷ ನೀಡಲಾಗಿರುವ ಸೌಲಭ್ಯ ಹಾಗೂ ಸಹಾಯಧನ ಮತ್ತು ಯೋಜನೆಯ ಸಾಧನೆ ಕುರಿತಾಗಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net