ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆಹೆಸರು ನೋಂದಣಿ ಕಾರ್ಯ ಚುರುಕು

14BTP01
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಬೆಟ್ಟದಪುರದಲ್ಲಿ ಜಾಗೃತಿ ಮೂಡಿಸುತ್ತಿರುವುದು.
Published on

ಬೆಟ್ಟದಪುರ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ರೈತರ ಹೆಸರನ್ನು ನೋಂದಾಯಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಪಿರಿಯಾಪಟ್ಟಣ ತಾಲೂಕಿನ ಪ್ರತಿ ಹಳ್ಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ರೈತರ ಹಿತಕಾಯುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೇಂದ್ರ ಸರ್ಕಾರವು ವಿಮೆ ಯೋಜನೆಯನ್ನು ಜಾರಿ ಮಾಡಿದ್ದು, ರೈತರು ಹಾಲಿ ಇರುವ ಬೆಳೆಗಳಿಗೆ ಬಿತ್ತನೆಯಿಂದ ಕಟಾವು ಹಂತದವರೆಗೆ ಬರ, ಶುಷ್ಕ, ಪರಿಸ್ಥಿತಿ, ಆಲಿಕಲ್ಲು ಮಳೆ, ಭೂಕುಸಿತ ಸೇರಿದಂತೆ ಮುಂತಾದವುಗಳಿಂದ ಇಳುವರಿ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯೋಜನೆ ಕೆಲಸ ಮಾಡಲಿದೆ. ಬೆಳೆ ಕಟಾವಿನ ನಂತರ ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ 14 ದಿನದೊಳಗೆ ಆಲಿಕಲ್ಲು ಮಳೆ, ಚಂಡಮಾರುತ ಸೇರಿದಂತೆ ಇತರ ನಿರ್ದಿಷ್ಟ ಪ್ರಕೃತಿ ವಿಕೋಪಗಳಿಂದ ನಷ್ಟ ಊಂಟಾದರೆ ಈ ವಿಮೆ ಯೋಜನೆ ರೈತರಿಗೆ ಸಹಕಾರಿಯಾಗಿದೆ.

ಬೆಳೆ ಸಾಲ ಪಡೆದ ರೈತರಿಗೆ ಈ ವರ್ಷ ಬೆಳೆ ವಿಮೆ ಬೇಡ ಅನ್ನಿಸಿದಲ್ಲಿ ತಮ್ಮ ವ್ಯಾಪ್ತಿಯ ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ ಏಳು ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಬೇಕು. ಬೆಳೆ ಸಾಲ ಪಡೆಯದಿರುವ ರೈತರು ಬೆಳೆ ವಿಮೆ ಮಾಡಿಸಲು ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದಾಗಿದೆ. ಜಮೀನಿನ ಪಹಣಿ, ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಮತ್ತು ವಿಮಾ ಅರ್ಜಿಯೊಂದಿಗೆ ಯಾವ ಬೆಳೆಗೆ ವಿಮೆ ಮಾಡಿಸಲಾಗುತ್ತದೆಯೋ ಆ ಬೆಳೆ ವಿಮೆ ಕಂತನ್ನು (ಪ್ರೀಮಿಯಂ) ಪಾವತಿಸಬೇಕು. ರೈತರು ಪ್ರಸ್ತುತ ಮುಂಗಾರಿನಲ್ಲಿ ಯಾವ ಬೆಳೆಯನ್ನು ಬೇಸಾಯ ಮಾಡಿದ್ದಾರೆ ಎಂಬುದನ್ನು ಆಧರಿಸಿ ಪ್ರೀಮಿಯಂ ಕಂತು ನಿಗದಿಯಾಗುತ್ತದೆ.

ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಭತ್ತ, ಮುಸುಕಿನ ಜೋಳ ಹಾಗೂ ಹೋಬಳಿ ಮಟ್ಟದ ಬೆಳೆಗಳಾದ ಜೋಳ, ರಾಗಿ, ಸಜ್ಜೆ, ನವಣೆ, ತೊಗರಿ, ಹುರುಳಿ, ಸೂರ್ಯಕಾಂತಿ, ಎಳ್ಳು, ಹತ್ತಿ, ನೆಲಗಡಲೆ, ಈರುಳ್ಳಿ, ಭತ್ತ, ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿದೆ.

ಸದ್ಯ ವಿಮೆ ನೋಂದಣಿಯಲ್ಲಿ ಪಿರಿಯಾಪಟ್ಟಣ ತಾಲೂಕಿನ ಕಸಬಾ ಹೋಬಳಿಗೆ ಭತ್ತ, ರಾಗಿ, ಬೆಟ್ಟದಪುರ ಹೋಬಳಿಗೆ ಭತ್ತ, ಮುಸುಕಿನ ಜೋಳ, ರಾಗಿ ಅಲಸಂದೆ, ಆಲೂಗಡ್ಡೆ, ರಾವಂದೂರು ಮತ್ತು ಹಾರನಹಳ್ಳಿ ಹೋಬಳಿಗೆ ಭತ್ತ, ಮುಸುಕಿನ ಜೋಳ, ರಾಗಿ, ಅಲಸಂದೆಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಅಲಸಂದೆ ಬೆಳೆಗೆ ಜು.1, ಆಲುಗಡ್ಡೆ ಬೆಳೆಗೆ ಜು.15, ಭತ್ತ ಬೆಳೆಗೆ ಆ.18, ಜೋಳ, ರಾಗಿ ಬೆಳೆಗಳಿಗೆ ಜು.31 ಕಡೆಯ ದಿನವಾಗಿದೆ.
ಸರ್ಕಾರ ಜಾರಿಗೆ ತಂದಿರುವ ಸಂರಕ್ಷಣೆ ಕರ್ನಾಟಕ ಜಾಲತಾಣಕ್ಕೆ ರೈತರು ಭೇಟಿ ನೀಡಿ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೈಸೂರು ಜಿಲ್ಲೆಗೆ ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಕಂಪನಿ ಆಯ್ಕೆಯಾಗಿದ್ದು, ರೈತರು ಮಾಹಿತಿ ಬೇಕಾದಲ್ಲಿ ಟೋಲ್ ಫ್ರೀ ನಂ.18002093536 ಸಂಪರ್ಕಿಸಬಹುದಾಗಿದೆ.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಮತ್ತು ಹಾರನಹಳ್ಳಿ ಹೋಬಳಿ ಕೇಂದ್ರಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಬೆಳೆ ವಿಮೆ ಅರಿವು ಮೂಡಿಸುತ್ತಿದ್ದಾರೆ. ಬೆಟ್ಟದಪುರ ವ್ಯಾಪ್ತಿಯ ಆನಿವಾಳು, ಬೆಟ್ಟದಪುರ, ಬೆಟ್ಟದತುಂಗ, ಅತ್ತಿಗೋಡು, ಎನ್.ಶೆಟ್ಟಳ್ಳಿ, ಹರದೂರು, ಹಲಗನಹಳ್ಳಿ, ಈಚೂರು ಸೇರಿದಂತೆ ಹಲವು ಗ್ರಾಮಗಳಿಗೆ ಕೃಷಿ ಅಧಿಕಾರಿ ನವ್ಯಾ, ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಕೆ.ಎಂ ಸುಶ್ಮಿತಾ, ಜಿ.ಎಸ್ ಚಂದ್ರಕಲಾ ಹಾಗೂ ಸಿಬ್ಬಂದಿ ಭೇಟಿ ನೀಡಿ ವಿಮೆ ಕುರಿತು ಒಂದು ವಾರದಿಂದ ಅರಿವು ಮೂಡಿಸುತ್ತಿದ್ದಾರೆ.

ಬೆಳೆ ವಿಮೆ ರೈತರಿಗೆ ಅನುಕೂಲವಾಗಲಿದೆ. ರೈತರಿಗೆ ಇದರ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕು. ಈಗಾಗಲೇ ರೈತರು ಬರಗಾಲದಿಂದ ಹಾಗೂ ಅಧಿಕ ಮಳೆಯಿಂದ ಬೆಳೆ ಕಳೆದುಕೊಂಡಿದ್ದಾರೆ. ಅಂತಹ ರೈತರ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಬೇಕಿದೆ.
ಸಣ್ಣತಮ್ಮೇಗೌಡ ರೈತ, ಚಪ್ಪರದಹಳ್ಳಿ

ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆ ರೈತಾಪಿ ವರ್ಗದವರಿಗೆ ಅನುಕೂಲವಾದದ್ದು. ಆದರೆ ಈ ಬಗ್ಗೆ ಹಲವು ರೈತರಲ್ಲಿ ಅನೇಕ ಗೊಂದಲ ಕಾಡುತ್ತಿದೆ. ನಿಜವಾದ ರೈತನಿಗೆ ಯೋಜನೆ ಸದುಪಯೋಗವಾಗಬೇಕು. ಅದಕ್ಕಾಗಿ ಕೃಷಿ ಇಲಾಖೆ ಸೇರಿದಂತೆ ಸರ್ಕಾರ ಜಾಗೃತಿ ಮೂಡಿಸಬೇಕಿದೆ.
ಎಚ್.ಎಸ್ ಮಂಜುನಾಥ್ ಕೃಷಿಕ, ಹರದೂರು

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮಾಡಿಸುವಂತೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಳ್ಳಿಗಳಿಗೆ ಭೇಟಿ ನೀಡಿ ರೈತರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ವಿಮೆಗೆ ಅರ್ಹತೆ ಇರುವ ಬೆಳೆಗಳು, ಬರ ಅಥವಾ ನೆರೆ ಸಂದರ್ಭದಲ್ಲಿ ಹಾಳಾದರೆ ವಿಮೆ ನೆರವಿಗೆ ಬರಲಿದೆ. ಗೊಂದಲ ಇದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ರೈತರು ಭೇಟಿ ನೀಡಿ ಅಥವಾ ಇಲಾಖೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಪ್ರಸಾದ್ ಸಹಾಯಕ ಕೃಷಿ ನಿರ್ದೇಶಕ, ಪಿರಿಯಾಪಟ್ಟಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net