ರೈತರ ಹಿತ ಕಾಯುವ ಪ್ರಧಾನಮಂತ್ರಿ ಫಸಲ್ ಬಿಮಾ

mkg
Published on

ಚನ್ನಗಿರಿ: ಬರಗಾಲ, ಪ್ರಾಕೃತಿಕ ವಿಕೋಪಗಳಿಂದ ಹಾನಿಗೊಳಗಾಗುವ ಬೆಳೆಗಳ ನಷ್ಟ ಭರಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿದೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಅರುಣ್‌ಕುಮಾರ್ ಗುನ್ನಾ ತಿಳಿಸಿದರು.

ಎರೇಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧ್ದಿ ಯೋಜನೆಯಡಿ ರೈತರಿಗೆ ಗುರುವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಸಾಲ ಮಾಡಿ ಬೀಜ,ಗೊಬ್ಬರ ಖರೀದಿಸಿ ಬಿತ್ತಿದಾಗ ಮಳೆ ಕೈಕೊಟ್ಟರೆ ರೈತರು ಬೀದಿಗೆ ಬಂದು ನಿಲ್ಲಬೇಕಾಗುತ್ತದೆ. ಸಾಲ ತೀರಿಸಲಾಗದೆ ಆತ್ಯಹತ್ಯೆಯಂಥ ಕೃತ್ಯಗಳಿಗೆ ಬಲಿಯಾಗುತ್ತಾರೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಯೋಜನೆಯಡಿ ನೋಂದಣಿ ಮಾಡಿಸಿದ ಪ್ರತಿಯೊಬ್ಬ ರೈತರಿಗೆ ಶೇ.50ರಷ್ಟು ಬೆಳೆವಿಮೆ ದೊರೆಯುತ್ತದೆ ಎಂದರು.

ರೈತರು ಮೊಬೈಲ್ ಆ್ಯಪ್ ಮೂಲಕ ಅಥವಾ ಕೃಷಿ ಅಧಿಕಾರಿಗಳ ಮೂಲಕ ಬೆಳೆ ಸಮೀಕ್ಷೆ ದೃಢೀಕರಿಸಬಹುದು. ಕಳೆದ ಸಾಲಿನಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ತಾಲೂಕಿನ 4462 ಹೆಕ್ಟೆರ್ ರೈತರ ಬೆಳೆಗಳಿಗೆ 5 ಕೋಟಿ ರೂ. ಪರಿಹಾರ ದೊರೆತಿದೆ ಎಂದು ಮಾಹಿತಿ ನೀಡಿದರು.

ಮಳೆ ಬಾರದೆ, ಬಿತ್ತನೆ ಮಾಡದೆ ಇದ್ದರೂ ಬೆಳೆ ವಿಮೆ ನೋಂದಣಿ ಮಾಡಲು ಅವಕಾಶವಿರುತ್ತದೆ. ಬೆಳೆ ವಿಮೆ ನಷ್ಟ ಸಂಭವಿಸಿ 72 ಗಂಟೆ ಒಳಗೆ ಮಾಹಿತಿ ನೀಡಬೇಕು. ಪರಿಹಾರ ಪಡೆಯಲು ಸೂಕ್ತ ದಾಖಲೆ ನೀಡಬೇಕು. ಮೆಕ್ಕೆಜೋಳ, ರಾಗಿ, ತೊಗರಿ, ಹಲಸಂದೆ ಸೇರಿದಂತೆ ಇತರೆ ಬೆಳೆಗಳ ಬೆಳೆ ವಿಮೆ ಮಾಡಿಸಲು ಜುಲೈ 31 ಕೊನೇ ದಿನ. ತೋಟಗಾರಿಕೆ ಬೆಳೆಗಳಿಗೆ ಆಗಸ್ಟ್ ಅಂತ್ಯದವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಕಲಾ, ಗ್ರಾಪಂ ಉಪಾಧ್ಯಕ್ಷೆ ರಾಜೇಶ್ವರಿ, ಸಂಸ್ಥೆ ತಾಲೂಕು ಯೋಜನಾಧಿಕಾರಿ ಶ್ರೀಧರ್, ಸಂಸ್ಥೆ ಕೃಷಿ ಅಧಿಕಾರಿ ಹನುಮಂತಪ್ಪ, ದೋಣಿಹಳ್ಳಿ ವಲಯ ಮೇಲ್ವಿಚಾರಕ ರವಿಕುಮಾರ್, ಸೇವಾ ಪ್ರತಿನಿಧಿ ಸೌಮ್ಯ, ಸುನಿತಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net