

ಹುಬ್ಬಳ್ಳಿ: ಬಿಜೆಪಿಯಿಂದ 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಪ್ರದೀಪ ಶೆಟ್ಟರ್ ಅವರಿಂದ ಈ ರೀತಿ ಹೇಳಿಕೆ ನಿರೀಕ್ಷಿಸಿರಲಿಲ್ಲ.
ಪಕ್ಷದಲ್ಲಿ ಯಾವತ್ತೂ ಯಾರನ್ನೂ ಕಡೆಗಣಿಸುವ ವಿಚಾರ ಇಲ್ಲವೇ ಇಲ್ಲ. ಪಕ್ಷಕ್ಕೆ ಕಾರ್ಯಕರ್ತರಿಂದ ಹಿಡಿದು ಕೇಂದ್ರ ನಾಯಕರವರೆಗೆ ಎಲ್ಲರೂ ಗಣ್ಯರು ಎಂಬುದನ್ನು ಅವರು ಅರಿಯಬೇಕಿತ್ತು ಎಂದು ಧಾರವಾಡ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಕ್ಷದಲ್ಲಿ ಲಿಂಗಾಯತ ಸಮುದಾಯದ ನಾಯಕರನ್ನು ಕಡೆಗಣಿಸಲಾಗಿದೆ. ವ್ಯವಸ್ಥಿತವಾಗಿ ಹಣಿಯಲಾಗಿದೆ ಎಂದು ಬಾಲಿಶ ಹೇಳಿಕೆ ನೀಡಿರುವುದು ತೀವ್ರ ಖಂಡನೀಯ. ಜಗದೀಶ ಶೆಟ್ಟರ್ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಪಕ್ಷದ ಚಿಹ್ನೆಯಿಂದ ಹೊರತು, ವ್ಯಕ್ತಿಗತವಾಗಿ ಅಲ್ಲ ಎಂದಿದ್ದಾರೆ.
ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸನ್ಮಾನ ಸಮಾರಂಭವನ್ನು ಪಕ್ಷದಿಂದ ತುರ್ತಾಗಿ ಆಯೋಜಿಸಲಾಗಿತ್ತು. ಕೇವಲ 2 ದಿನ ಬಾಕಿ ಇತ್ತು. ಸುಮಾರು 145 ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ಕರೆತರುವ ದೊಡ್ಡ ಜವಾಬ್ದಾರಿ ಇತ್ತು.
ಹಾಗಾಗಿ ಎಂಎಲ್ಸಿ ಪ್ರದೀಪ ಶೆಟ್ಟರ್ ಅವರನ್ನು ಆಹ್ವಾನಿಸಲು ನಾನು ಮರೆತಿರಬಹುದೇ ಹೊರತು ದುರುದ್ದೇಶದಿಂದ ತಿಳಿಸದೇ ಇದ್ದುದಲ್ಲ. ನಾನು ಅವರಲ್ಲಿ ಈ ವಿಷಯವಾಗಿ ಕ್ಷಮೆ ಕೇಳಿದ್ದೇನೆ. ಬೇಕಾದರೆ ಬಹಿರಂಗವಾಗಿ ಕ್ಷಮೆ ಕೇಳಲು ಸಿದ್ಧನಿದ್ದೇನೆ ಎಂದು ಕುಂದಗೋಳಮಠ ಹೇಳಿದ್ದಾರೆ.