

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ನಗರಿಯ ಪ್ರಮುಖ ಕಿರಿದಾದ ಬಜಾರ್ ರಸ್ತೆ ಹಾಗೂ ಗಂಗಮ್ಮನಗುಡಿ ರಸ್ತೆ ಸರ್ವೇ ಕಾರ್ಯವನ್ನು ಮತ್ತೆ ಕೈಗೊಳ್ಳುತ್ತಿದ್ದು ಕನಿಷ್ಠ 6 ತಿಂಗಳಲ್ಲಿ ರಸ್ತೆಗಳ ವಿಸ್ತರಣೆ ಕಾಮಗಾರಿ ಮುಗಿಸುವ ಗುರಿಯನ್ನು ಚಿಕ್ಕಬಳ್ಳಾಪುರ ನಗರಸಭೆ ಹೊಂದಿದೆ.
ಇಲ್ಲಿನ ಎರಡು ರಸ್ತೆಗಳ ಸರ್ವೇ ಕಾರ್ಯವು ಹಲವು ವರ್ಷಗಳಿಂದಲೂ ನಡೆಯುತ್ತಿದೆ. ಒಂದೆಡೆ ವ್ಯಾಪಾರಸ್ಥರ ಹಿತ ಹಾಗೂ ವಾಣಿಜ್ಯೋದ್ಯಮದ ಲೆಕ್ಕಾಚಾರದ ಹೆಸರಿನಲ್ಲಿ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ನಗರದ ಅಭಿವೃದ್ಧಿ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಕಿರಿದಾದ ರಸ್ತೆಗಳಲ್ಲಿನ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲು ವ್ಯಾಪಕ್ತ ಒತ್ತಾಯ ಕೇಳಿ ಬರುತ್ತಿದೆ. ಇದರಲ್ಲಿ ರಾಜಕಾರಣವು ಸೇರಿಕೊಂಡು ಪ್ರಕ್ರಿಯೆಗಳು ಚರ್ಚೆಗೆ ಮಾತ್ರ ಸೀಮಿತವಾಗಿದೆ. ಆದರೆ, ಈ ಬಾರಿ ಖುದ್ದು ಪೌರಾಯುಕ್ತ ಮನ್ಸೂರು ಅಲಿರವರೇ ಫೀಲ್ಡಿಗಿಳಿದು ವಿಸ್ತರಣೆಯ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡುತ್ತಿರುವುದರಿಂದ ತ್ವರಿತ ಸರ್ವೇ ಕಾರ್ಯ ಮುಗಿಸಿ, ರಸ್ತೆಗಳನ್ನು ಅಭಿವೃದ್ಧಿ ಕೈಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ.
*ಪ್ರಮುಖ ರಸ್ತೆಗಳ ಸರ್ವೇ*
ಭುವನೇಶ್ವರಿ ವೃತ್ತದಿಂದ ಹಿಡಿದು ಎಂ.ಜಿ.ರಸ್ತೆಯಲ್ಲಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ವರೆಗಿನ ಗಂಗಮ್ಮನಗುಡಿ ರಸ್ತೆ ಸರ್ವೇ ಕಾರ್ಯವನ್ನು ಸಹ ಕೈಗೊಳ್ಳಲಾಗುತ್ತಿದೆ.
ಬಜಾರ್ ರಸ್ತೆ ಹಾಗೂ ಗಂಗಮ್ಮನಗುಡಿ ರಸ್ತೆಯ ಬದಿಯಲ್ಲಿನ ಚಿನ್ನಾಭರಣ ಅಂಗಡಿ ಮಾಲೀಕರು, ಚಿಲ್ಲರೆ ಅಂಗಡಿಗಳ ಕಟ್ಟಡ ಮಾಲೀಕರು ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದು ರಾಜಕೀಯ ನಾಯಕರನ್ನು ಸಂಪರ್ಕಿಸಿ, ಒತ್ತಡ ಹೇರುವ ನಿಟ್ಟಿನಲ್ಲಿ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ವತಃ ಸಂಸದ ಡಾ ಕೆ.ಸುಧಾಕರ್, ನಗರಸಭಾ ಅಧ್ಯಕ್ಷ ಎ.ಗಜೇಂದ್ರ ರಸ್ತೆಗಳ ವಿಸ್ತರಣೆಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂಗಡಿ ಮಾಲೀಕರಿಗೆ ಬೆಂಬಲವಾಗಿ ನಿಲ್ಲುವ ಮಾತನ್ನು ಹೇಳಿದ್ದರು. ಇದರ ನಡುವೆ ಶತಾಯ ಗತಾಯ ನಗರದಲ್ಲಿನ ಎರಡು ಇಕ್ಕಟ್ಟಿನ ರಸ್ತೆಗಳ ಅಕ್ರಮ ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುತ್ತದೆ. ಇದಕ್ಕೆ ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಕ್ಯಾರೆ ಎನ್ನುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ತಿಳಿಸಿದ್ದರು.
*ಎಲ್ಲರ ಸಹಕಾರ ಅಗತ್ಯ*
ಗಂಗಮ್ಮನಗುಡಿ ರಸ್ತೆ ಹಾಗೂ ಬಜಾರ್ ರಸ್ತೆ ವಿಸ್ತರಣೆಗೆ ಜನರು ಅಗತ್ಯ ಸಹಕಾರ ನೀಡಬೇಕು. ಇದರಿಂದ ತ್ವರಿತವಾಗಿ ರಸ್ತೆ ಅಭಿವೃದ್ಧಿ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಪೌರಾಯುಕ್ತ ಮನ್ಸೂರು ಅಲಿ ಮನವಿ ಮಾಡಿದ್ದಾರೆ.
ಕನಿಷ್ಠ ೬ ತಿಂಗಳಲ್ಲಿ ರಸ್ತೆಗಳ ವಿಸ್ತರಣೆ ಪ್ರಕ್ರಿಯೆ ಮುಗಿಯಬೇಕು. ಇನ್ನು ನಿಯಮಾನುಸಾರ ಕಟ್ಟಡ ನಿರ್ಮಿಸಿಕೊಂಡಿದ್ದಲ್ಲಿ ತೆರವು ಖಾಸಗಿ ಜಾಗಕ್ಕೆ ನಿಯಮಾನುಸಾರ ಪರಿಹಾರವನ್ನು ಒದಗಿಸಲಾಗುತ್ತದೆ. ರಸ್ತೆ ವಿಸ್ತರಣೆಯ ಮಾಹಿತಿ ಇದ್ದರೂ ಈಗಲೂ ಕಟ್ಟಡ ನಿರ್ಮಿಸುತ್ತಿರುವವರಿಗೆ ನೋಟಿಸ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.