

ಹಿರೇಕೆರೂರ: ಯೋಗವನ್ನು ನಮ್ಮ ಬದುಕಿನ ಅಂಗವಾಗಿ ಮಾಡಿಕೊಂಡರೆ ನಮ್ಮ ಆರೋಗ್ಯಕ್ಕೆ ಖಂಡಿತ ಲಾಭ ದೊರಕುತ್ತದೆ ಎಂದು ಪ್ರಾಂಶುಪಾಲ ಡಾ.ಎಸ್.ಪಿ. ಗೌಡರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಯೋಗಾಭ್ಯಾಸ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಗಾಸನದ ಉಪಯೋಗ ಯುವಕರಿಗೆ ದೊರೆತರೆ ಭವಿಷ್ಯದ ಭಾರತಕ್ಕೆ ಆರೋಗ್ಯವಂತ ನಾಗರಿಕರನ್ನು ಕೊಡುಗೆ ಕೊಟ್ಟಂತಾಗುತ್ತದೆ. ಆದ್ದರಿಂದ ಯೋಗವನ್ನು ತಪ್ಪದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಂಯೋಜಕ, ಪ್ರಸನ್ನಕುಮಾರ್ ಜೆ. ಮಾತನಾಡಿ, ಯುವಕರು ಉತ್ತಮ ಆರೋಗ್ಯಕ್ಕಾಗಿ ಯೋಗಾಸನ ಪ್ರಾಣಾಯಾಮ ನಿತ್ಯ ಮಾಡುವುದು ಒಳಿತು ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜ ಎಂ. ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ, ತ್ರಿಕೋನಾಸನ, ಪರಿವೃತ ತ್ರಿಕೋನಾಸನ, ವೀರಭದ್ರ ಆಸನ, ಪ್ರಾಣಾಯಾಮ, ಜಲ ನೇತಿ ಆಸನಗಳನ್ನು ಪ್ರದರ್ಶಿಸಿದರು.
ಪ್ರಾಧ್ಯಾಪಕರಾದ ರಾಮಚಂದ್ರಪ್ಪ, ಯತೀಶ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಹರೀಶ್ ಡಿ., ಡಾ. ಲಕ್ಷ್ಮಣ ಪೂಜಾರ, ಎಂ.ಬಿ. ಬದನೆಕಾಯಿ, ವಿ.ಜಿ. ಪಾಟೀಲ, ಎಲ್.ಎಂ. ಪೂಜಾರ ಹಾಗೂ ಅಥಿತಿ ಉಪನ್ಯಾಸಕರು, ಪ್ರಾಧ್ಯಾಪಕರು ಇದ್ದರು.