

ಹುಣಸೂರು: ಭಗವಾನ್ ಬುದ್ಧ ಜಗತ್ತಿಗೆ ನೀಡಿದ ಶಾಂತಿಮಂತ್ರದ ಪರಿಪಾಲನೆ ಇಂದಿನ ಅಗತ್ಯವಾಗಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ದಲಿತ ಸಂಘಟನೆಗಳಿಂದ ಆಯೋಜಿಸಿದ್ದ ಬುದ್ಧ ಪೌರ್ಣಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬುದ್ಧ ತನ್ನ ನಾಲ್ಕು ಉದಾತ್ತ ಸತ್ಯಗಳ ಬಗ್ಗೆ ತಿಳಿಸಿದ್ದಾರೆ. ದುಃಖದ ಸತ್ಯ, ಲೌಕಿಕ ಆಸೆಗಳ ನಿಯಂತ್ರಣ ಕುರಿತು ಹೆಚ್ಚಿನ ಮಹತ್ವ ನೀಡಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಶಾಂತಿಯ ಜೀವನ ಅವರ ಧ್ಯೇಯವಾಗಿದೆ. ಅವರ ಅನುಯಾಯಿಗಳು ವಿಶ್ವಾದ್ಯಂತ ಇದ್ದಾರೆ. ಸಮಾಜದಲ್ಲಿ ಸಮಾನತೆ, ಸಹೋದರತೆಯ ಪ್ರತೀಕವಾಗಿ ಬುದ್ಧತತ್ವಗಳನ್ನು ಅನುಸರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿದರು. ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಸವಲಿಂಗಯ್ಯ, ಹಿರಿಯ ಮುಖಂಡ ನಾಗರಾಜ ಮಲ್ಲಾಡಿ, ಮುಖಂಡರಾದ ಕಿರಂಗೂರು ಸ್ವಾಮಿ, ಡಾ.ಕೆ.ಪಿ.ಪ್ರಸನ್ನ, ಅತ್ತಿಕುಪ್ಪೆ ಸಿದ್ದೇಶ್, ಅತ್ತಿಕುಪ್ಪೆ ರಾಮಕೃಷ್ಣ, ಮೂರ್ತಿ ಇತರರು ಇದ್ದರು.