ವೃದ್ಯಾಪದಲ್ಲಿ ಆಧ್ಯಾತ್ಮಿಕ ಚಿಂತನೆ ನಡೆಸಿ

vedushakar shree sri new
ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ
Published on

ಶೃಂಗೇರಿ: ಬಾಲ್ಯದಲ್ಲಿ ಆಟವಾಡುವುದರಲ್ಲಿ, ಯೌವನದಲ್ಲಿ ಬೇರೆ ಬೇರೆ ರೀತಿಯ ಭೋಗವನ್ನು ಅನುಭವಿಸಿದ ಮಾನವನು ವೃದ್ಯಾಪದಲ್ಲಿ ಎಲ್ಲ ರೀತಿಯ ಚಿಂತನೆ ಬಿಟ್ಟು ಆಧ್ಯಾತ್ಮಿಕ ಚಿಂತನೆ ಮಾಡಬೇಕು.ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಕಡೆಮನೆ ವಾನಪ್ರಸ್ಥಾಶ್ರಮದಲ್ಲಿ ಆಯೋಜಿಸಿದ್ದ ಚಂಡಿಕಾಹೋಮದಲ್ಲಿ ಭಾಗವಹಿಸಿದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿ, ಬಾಲ್ಯದಿಂದ ಲೌಕಿಕ ಕೆಲಸದ ಜತೆಗೆ ಆಧ್ಯಾತ್ಮಿಕ ಜೀವನದ ಅವಶ್ಯಕತೆ ಇದೆ. ಜೀವನ ಪೂರ್ತಿ ಲೌಕಿಕ ಜೀವನ ಮಾಡಿದ್ದರೆ ಕೊನೆ ಕಾಲದಲ್ಲಿ ಆಧ್ಯಾತ್ಮಿಕ ಚಿಂತನೆ ಮಾಡುವುದು ಕಷ್ಟಕರ. ಹಾಗಾಗಿ ಬದುಕಿನ ಪ್ರತಿ ಹಂತದಲ್ಲೂ ಧಾರ್ಮಿಕ ಮೌಲ್ಯಗಳಿಗೆ ನಾವು ಹೆಚ್ಚಿನ ಆದ್ಯತೆ ನೀಡಬೇಕು. ಮನುಷ್ಯನ ಜೀವನದ ಪರಿಪೂರ್ಣತೆಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಿಂತನೆ ಅವಶ್ಯಕತೆ ಇದೆ. ಶರೀರ ಬಿಟ್ಟು ಹೋಗುವಾಗ ನಮ್ಮ ಜತೆಗೆ ಇರುವುದು ಧಾರ್ಮಿಕ ಮೌಲ್ಯಗಳು ಮಾತ್ರ.ಲೌಕಿಕ ವಸ್ತುಗಳು ತಾತ್ಕಾಲಿಕ. ಅಲೌಕಿಕ ಮೌಲ್ಯಗಳು ಶಾಶ್ವತ ಎಂದರು.
ಎಲ್ಲಾ ಕಾಲದಲ್ಲೂ ಸುಖ-ದು:ಖ, ಸೋಲು-ಗೆಲುವುಗಳನ್ನು ನಾವು ಸಮಚಿತ್ತವಾಗಿ ಎದುರಿಸಬೇಕಾದರೆ ನಮ್ಮ ಮನಸ್ಸು ಭಗವಂತನ ಕಡೆಗೆ ಹೆಚ್ಚು ಭಾಗಬೇಕು. ವಯಸ್ಸಾದ ಮೇಲೆ ನಾವು ಎಲ್ಲ ಚಿಂತೆಗಳನ್ನು ಬಿಟ್ಟು ಶುದ್ಧ ಮನಸ್ಸಿನಿಂದ ನಿರಂತರ ದೇವರನ್ನು ಪೂಜಿಸಬೇಕು. ಆಗ ನಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ. ಇಲ್ಲಿ ಗೋ ಶಾಲೆ ಪ್ರಾರಂಭವಾಗುವುದು ಅತ್ಯಂತ ಸಂತಸದ ವಿಚಾರ. ಗೋವಿಗೆ ಮಾತ್ರ ನಾವು ಮಾತಾ ಎಂದು ಕರೆಯುತ್ತೇವೆ. ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ ಎಂದು ತಿಳಿಸಿದರು.
ಆಶ್ರಮ ವ್ಯವಸ್ಥಾಪಕರಾದ ಗೋಕುಲ್‌ದಾಸ್ ಕಾಮತ್, ಗ್ರಾಮಸ್ಥರಾದ ಲಕ್ಷ್ಮೀನಾರಾಯಣ್, ಹೆಗ್ಗದ್ದೆ ಶಿವಾನಂದರಾವ್, ಬಾಲಗಂಗಾಧರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net