ಮನಸ್ಸಿನ ಏಕಾಗ್ರತೆಗೆ ಅಭ್ಯಾಸವೇ ಮುಖ್ಯ

2 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನಸ್ಸನ್ನು ಏಕಾಗ್ರತೆಗೊಳಿಸಲು ಅಭ್ಯಾಸವೇ ಪ್ರಧಾನ ಸಾಧನ. ಅಭ್ಯಾಸ ಎಂದರೆ ಪುನಃ ಪುನಃ ಪ್ರತಿದಿನ ಮಾಡುವ ಪ್ರಯತ್ನ ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂಧಗಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಕರ್ನಾಟಕ ಪ್ರೌಢ ಶಾಲೆ ಸಹಯೋಗದಲ್ಲಿ ಕರ್ನಾಟಕ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸೋಮವಾರ ಆಯೋಜಿಸಿದ್ದ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕಾಶಿ ಎಂದು ಕರೆಯಲ್ಪಡುವ ಧಾರವಾಡ ಜಿಲ್ಲೆ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಸಾಧನೆ ಮಾಡಿತ್ತು. ಈ ವರ್ಷ ಜಿಲ್ಲೆಯ ಉತ್ತೀರ್ಣತೆ ಪ್ರಮಾಣ ಹೆಚ್ಚಿಸಲು ಸಾಕಷ್ಟು ಯೋಜನೆ ರೂಪಿಸಲಾಗಿದೆ. ಸಂಘವು ಆಯೋಜಿಸಿದ ಕಾರ್ಯಕ್ರಮವು ಮಕ್ಕಳಲ್ಲಿ ಗುಣಾತ್ಮಕ ಬದಲಾವಣೆ ಜತೆಗೆ ಪರೀಕ್ಷೆ ಬಗ್ಗೆ ನೈತಿಕ ಸ್ಥೈರ್ಯ ತರಲಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ವಿಷಯದ ಕಡೆ ಗಮನ ಕೊಡಬೇಕು. ಅವಧಾನಿಗಳಾಗಿ ಓದಬೇಕು. ಸಂದಿಗ್ಧ ಸಮಸ್ಯೆಗಳಿದ್ದರೆ ಪ್ರಶ್ನೆ ಕೇಳುವುದರ ಮೂಲಕ ಪರಿಹಾರ ಪಡೆಯಬೇಕು. ಶ್ರದ್ಧೆ ಬದ್ಧತೆಯಿಂದ ಮಾತ್ರ ಏಕಾಗ್ರತೆ ಹೊಂದಲು ಸಾಧ್ಯ ಎಂದರು.
ಕರ್ನಾಟಕ ಪ್ರೌಢ ಶಾಲೆ ಆಡಳಿತಾಧಿಕಾರಿ ಜಿ.ಆರ್. ಭಟ್ ಮಾತನಾಡಿ, ಸ್ವಭಾವತಃ ಮನಸ್ಸು ಚಂಚಲವಾಗಿರುತ್ತದೆ. ಈ ಮನಸ್ಸನ್ನು ಕೇಂದ್ರಿಕರಿಸಿ ಅಧ್ಯಯನ ಮಾಡಿದರೆ ಸಾಧನೆ ಸಾಧ್ಯ. ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಜ್ಞಾನದಲ್ಲಿ ಶಕ್ತಿ ಇದೆ. ಪಠ್ಯದ ಜತೆಗೆ ಬೇರೆ ಆಕರ ಓದಿ ಜ್ಞಾನ ಸಂಗ್ರಹ ಮಾಡಿಕೊಳ್ಳಬೇಕು ಎಂದರು.
ಕೆ.ಇ.ಬೋರ್ಡ್ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಅಧ್ಯಕ್ಷತೆ ವಹಿಸಿದ್ದರು. ಡಿಮ್ಹಾನ್ಸ ಮನೋ ವೈದ್ಯಕೀಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿದರು. ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಪ್ರಮೀಳಾ ಜಕ್ಕಣ್ಣವರ, ಎಂ.ಎಸ್. ನರೇಗಲ್, ಕೆ.ಜಿ. ದೇವರಮನಿ, ಇತರರು ಇದ್ದರು.
ಪ್ರಾಚಾರ್ಯ ಎನ್.ಎನ್. ಸವಣೂರ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಫ್. ಮೂಲಿಮನಿ ನಿರೂಪಿಸಿದರು. ಬಿ.ಬಿ. ಸಿಂೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net