ಜ್ಞಾನ, ವೈರಾಗ್ಯ ಎಚ್ಚರಿಸಲು ಪ್ರಚವನ ಅಗತ್ಯ

Bindu madhava
Published on

ಹಾನಗಲ್ಲ: ಜ್ಞಾನ ಮತ್ತು ವೈರಾಗ್ಯಗಳು ಕಲಿಯುಗದಲ್ಲಿ ನಿದ್ರಾವಸ್ಥೆಯಲ್ಲಿವೆ. ಅವುಗಳನ್ನು ಎಚ್ಚರಿಸಲು ಕಾಲಕಾಲಕ್ಕೆ ಧಾರ್ಮಿಕ ಪ್ರಚನಗಳ ಅಗತ್ಯವಿದೆ ಎಂದು ಬಾಗಲಕೋಟೆಯ ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಹೇಳಿದರು.

ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಅಧಿಕಮಾಸ ಸೇವಾ ಸಮಿತಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾಗವತ ಸಪ್ತಾಹದಲ್ಲಿ ಅವರು ಪ್ರವಚನ ನೀಡಿದರು. ವೇದವ್ಯಾಸರು ರಚಿಸಿದ ಭಾಗವತ ವೇದಗಳಿಗೆ ಸಮಾನವಾದುದು. ವೇದಗಳು ಅನಂತವಾಗಿದ್ದವು. ವ್ಯಾಸ ಮಹರ್ಷಿಗಳು ಅವುಗಳನ್ನು ನಾಲ್ಕು ಭಾಗಗಳನ್ನಾಗಿ ವಿಭಾಗಿಸಿದರು. 564 ಬ್ರಹ್ಮಸೂತ್ರ, 17 ಪುರಾಣಗಳನ್ನು ರಚಿಸಿದರು. ಕಲಿಯುಗದಲ್ಲಿ ಜನರಿಗೆ ಇವೆಲ್ಲವನ್ನೂ ಅಧ್ಯಯನ ಮಾಡುವ ವ್ಯವಧಾನವಿಲ್ಲದಾಗಿದೆ. ಹೀಗಾಗಿ ಎಲ್ಲ ಗ್ರಂಥಗಳ ಸಾರವೇ ಭಾಗವತ. ಭಾಗವತ ಪುರಾಣ ಶ್ರವಣದಿಂದ ಜ್ಞಾನ, ವೈರಾಗ್ಯ, ಭಕ್ತಿ ಪ್ರಾಪ್ತವಾಗುತ್ತದೆ. ಪದ್ಮಪುರಾಣದಲ್ಲಿ ಭಾಗವತದ ಕುರಿತಾಗಿ ಇನ್ನಷ್ಟು ನಿರೂಪಿಸಲಾಗಿದೆ ಎಂದು ವಿವರಿಸಿದರು.

ಬ್ರಾಹ್ಮಣ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಟಿ.ಆರ್. ವೇದಂಭಟ್‌ನವರ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಡಿ.ಜಿ. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಸಮಿತಿ ಅಧ್ಯಕ್ಷ ವೇದವ್ಯಾಸ ಲಿಂಗೇರಿ, ಆರ್.ಸಿ. ದೇಸಾಯಿ, ಕೆ.ಎಲ್. ದೇಶಪಾಂಡೆ, ಶರತ್ ದೇಸಾಯಿ, ಶ್ರೀಪಾದ ಅಕ್ಕಿವಳ್ಳಿ, ದತ್ತಾತ್ರೇಯ ದೇಸಾಯಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net