ಪ್ರಚಂಡ ಗೆಲುವು ದಾಖಲಿಸಿದ ಡಾ.ಎನ್.ಟಿ.ಶ್ರೀನಿವಾಸ್

HB HALLI
ಕೂಡ್ಲಿಗಿಯ ಮದಕರಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೆಲುವಿನ ನಗೆ ಬೀರಿ ಸಂಭ್ರಮಿಸಿದರು.
Published on

ಕೂಡ್ಲಿಗಿ: ಕೂಡ್ಲಿಗಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಭದ್ರಕೋಟೆಯನ್ನು ಕಾಂಗ್ರೆಸ್ ಅಭ್ಯರ್ಥಿ ಡಾ.ಎನ್.ಟಿ.ಶ್ರೀನಿವಾಸ್ ಈ ಬಾರಿ ಛಿದ್ರಗೊಳಿಸಿ ಪ್ರಚಂಡ ಜಯಭೇರಿ ಗಳಿಸಿದ್ದಾರೆ.
2008 ರಲ್ಲಿ ಕ್ಷೇತ್ರ ವಿಂಗಡಣೆಯಾಗಿ ಎಸ್ಟಿ ಮೀಸಲು ಕ್ಷೇತ್ರವಾದ ನಂತರ ಹದಿನೈದು ವಷರ್ದಿಂದ ಈವರೆಗೂ ಬಿಜೆಪಿ ವಿಜಯದ ಕಹಳೆ ಊದಿತ್ತು. ಅದರಲ್ಲೂ ಬರೀ ಕ್ಷೇತ್ರದ ಹೊರಗಿನ ಅಭ್ಯರ್ಥಿಗಳೇ ಇಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಆದರೆ, ಗೆದ್ದ ನಂತರ ಅಧಿಕಾರ ಅನುಭವಿಸಿ ನಂತರ ಕ್ಷೇತ್ರ ಬಿಟ್ಟು ಹೋಗುವುದು ಇಲ್ಲಿನ ಜನರಿಗೆ ರೋಸಿ ಹೋಗಿತ್ತು. ಇದನ್ನು ಮನಗಂಡ ಇಲ್ಲಿನ ಜನರು ಈ ಬಾರಿ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಟ್ಟಿದ್ದರು. ಅದರಂತೆ ಈ ಬಾರಿ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಡಾ.ಎನ್.ಟಿ.ಶ್ರೀನಿವಾಸ ಅವರಿಗೆ ಟಿಕೆಟ್ ನೀಡಿತು. ಇನ್ನೂ ಬಿಜೆಪಿ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ 9 ವಷರ್ದಿಂದ ಕ್ಷೇತ್ರದಲ್ಲಿ ಚಿರಪರಿಚಿತನಾದ ಲೋಕೇಶ್ ನಾಯಕ ಅವರನ್ನ ಕಾಂಗ್ರೆಸ್ ಪಕ್ಷದಿಂದ ಸೆಳೆದು ಬಿಜೆಪಿ ಟಿಕೆಟ್ ನೀಡಿತು. ಇದರಿಂದ ಬಿಜೆಪಿ ಸ್ಥಳೀಯ ಆಕಾಂಕ್ಷಿ ಅಭ್ಯರ್ಥಿಗಳು ಪಕ್ಷದ ವಿರುದ್ಧ ಮುನಿಸಿಗೊಂಡಿದ್ದರು. ಈ ಪರಿಸ್ಥಿತಿಯ ಲಾಭ ಪಡೆದ ಕಾಂಗ್ರೆಸ್ ಬಿಜೆಪಿಯ ಅನೇಕ ಮುಖಂಡರಿಗೆ ಗಾಳ ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿತು. ಇದರಿಂದ ಫಲಿತಾಂಶ ಅಚ್ಚರಿಯ ಜತೆ ಪ್ರಚಂಡ ಗೆಲುವು ದಾಖಲಿಸಲು ಕಾರಣವಾಯಿತು.

ಅಪ್ಪನ ಆಸೆ ಈಡೇರಿಸದ ಮಗ

1984 ಹಾಗೂ 89 ರಲ್ಲಿ ಕಾಂಗ್ರೆಸ್‌ನಿಂದ ಎರಡು ಬಾರಿ ಸತತವಾಗಿ ಗೆದ್ದು ಶಾಸಕರಾಗಿದ್ದ ಎನ್.ಟಿ.ಬೊಮ್ಮಣ್ಣ, ಬದಲಾದ ರಾಜಕೀಯದಲ್ಲಿ ಅನ್ಯ ಪಕ್ಷದಿಂದ ಸ್ಪರ್ಧೆ ಮಾಡಿ ಕೈ ಸುಟ್ಟುಕೊಂಡಿದ್ದರು. ಕಳೆದ ಬಾರಿ 2018ರಲ್ಲಿ ಆಯ್ಕೆ ಬಯಸಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ ಬಿಜೆಪಿಯ ಎನ್.ವೈ.ಗೋಪಾಲಕೃಷ್ಣ ವಿರುದ್ಧ ಸೋಲುಂಡಿದ್ದರು. ನಂತರ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದರು. ಮತ್ತೊಮ್ಮೆ ಕೂಡ್ಲಿಗಿ ಶಾಸಕನಾಗುವ ಬಯಕೆ ತಂದೆಯ ಮರಣದ ನಂತರ ಆ ಕುಟುಂಬಕ್ಕೆ ಇನ್ನಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಕ್ಷೇತ್ರದ ಜನತೆ ಬೊಮ್ಮಣ್ಣ ನಿಧನ ನಂತರ ಅವರ ಕಿರಿ ಮಗ ಡಾ.ಎನ್.ಟಿ.ಶ್ರೀನಿವಾಸ್ ಅವರನ್ನ ರಾಜಕೀಯಕ್ಕೆ ಬರುವಂತೆ ಅಪೇಕ್ಷೆ ಪಟ್ಟಿತ್ತು. ಇದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶ್ರೀನಿವಾಸ್ ಅವರನ್ನು ಬರಮಾಡಿಕೊಂಡು ಟಿಕೆಟ್ ನೀಡಿತು. ಇದರಿಂದ ಸ್ಥಳೀಯ ಅಭ್ಯರ್ಥಿ ಎನ್ನುವ ಕಾರಣಕ್ಕೆ ಕ್ಷೇತ್ರದ ಜನ ಮತ ನೀಡಿ ಕೈಹಿಡಿದರು.

ಹದಿನೈದು ವರ್ಷಗಳಿಂದ ಕಾಂಗ್ರೆಸೇತರ ಪಕ್ಷ ಇಲ್ಲಿ ಗೆಲುವು ಸಾಧಿಸಲು ಪ್ರಬಲ ಲಿಂಗಾಯತ ಮತಗಳೇ ಇಲ್ಲಿ ನಿರ್ಣಾಯಕವಾಗಿದ್ದವು. ಪ್ರತಿ ಚುನಾವಣೆಯಲ್ಲಿ ಲಿಂಗಾಯತ ಮತಗಳು ಬಿಜೆಪಿ ಪಕ್ಷಕ್ಕೆ ತಮ್ಮ ಬೆಂಬಲ ನೀಡುತ್ತ ಬಂದಿದ್ದವು. ಕ್ಷೇತ್ರದಲ್ಲಿ 58,000 ಲಿಂಗಾಯತ ಮತಗಳು ಬರೀ ಹೊರಗಿನ ಅಭ್ಯರ್ಥಿಗಳಿಗೆ ಮತ ನೀಡುತ್ತಿದ್ದರು. ಎನ್.ಟಿ.ಬೊಮ್ಮಣ ಕೂಡ ಈ ಮತ ಬ್ಯಾಂಕ್ ಪಡೆಯುವಲ್ಲಿ ವಿಫಲರಾಗಿದ್ದರು. ಇದನ್ನು ಅರಿತ ಶ್ರೀನಿವಾಸ್ ಈ ಬಾರಿ ಕ್ಷೇತ್ರದ ಲಿಂಗಾಯತ ಮುಖಂಡರನ್ನು ಮನವೊಲಿಸಿದ್ದರು. ಇದು ಸೇರಿದಂತೆ ಬಹುತೇಕ ಪ್ರಚಾರ ಕಾರ್ಯದಲ್ಲಿ ಇವರ ಪತ್ನಿ ಡಾ.ಎನ್.ಟಿ. ಪುಷ್ಪ ಕೈ ಜೋಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net