

ಹುಬ್ಬಳ್ಳಿ: ರಾಜ್ಯದಲ್ಲೇ ಅತಿದೊಡ್ಡದಾದ ಮಾರುಕಟ್ಟೆ ಪ್ರಾಂಗಣ ಹೊಂದಿರುವ ಇಲ್ಲಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕಾಯಂ ಕಾರ್ಯದರ್ಶಿಯಿಲ್ಲದೇ ಆರು ತಿಂಗಳು ಗತಿಸಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಸರ್ಕಾರದ ನಿರ್ಲಕ್ಷ್ಯ್ಕೆ ಬಿಜೆಪಿಯವರು ಸೇರಿದಂತೆ ಎಲ್ಲ ಸದಸ್ಯರೂ ಅಸಮಾಧಾನ ವ್ಯಕ್ತಪಡಿಸತೊಡಗಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿ ಎಪಿಎಂಸಿಗೆ ಮಹಸೂಲುಗಳು ಈ ತಾಲೂಕು ಅಥವಾ ಧಾರವಾಡ ಜಿಲ್ಲೆಯಿಂದ ಮಾತ್ರ ಬರುವುದಿಲ್ಲ; ಅಕ್ಕಪಕ್ಕದ ನಾಲ್ಕಾರು ಜಿಲ್ಲೆಗಳು ಹಾಗೂ ಕೊಲ್ಲಾಪುರ, ಪುಣೆ, ನಾಗಪುರ ಸೇರಿ ಮಹಾರಾಷ್ಟ್ರದ ಕೆಲ ಭಾಗದಿಂದಲೂ ಬರುತ್ತವೆ. ಹುಬ್ಬಳ್ಳಿಯ ಪ್ರಮುಖ ಹೋಲ್ಸೇಲ್ ಮಾರುಕಟ್ಟೆಯೂ ಇದೇ ಪ್ರಾಂಗಣದಲ್ಲಿದೆ. ರಾಜ್ಯ, ಹೊರರಾಜ್ಯದ ಖರೀದಿದಾರರು ಇಲ್ಲಿಗೆ ಬರುತ್ತಾರೆ. ಹೀಗಾಗಿ, ವಿಸ್ತಾರಕ್ಕೆ ತಕ್ಕಂತೆ ಹಿರಿಯ ಅಧಿಕಾರಿಯನ್ನೇ ಈ ಎಪಿಎಂಸಿ ಕಾರ್ಯದರ್ಶಿಯಾಗಿ ನೇಮಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.
ಬೆಳಗಾವಿ ಎಪಿಎಂಸಿ ಕಾರ್ಯದರ್ಶಿ ಡಾ. ಕೆ. ಕೋಡಿಗೌಡ್ರ ಕಳೆದ ಆರು ತಿಂಗಳಿಂದ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸಾಮಾನ್ಯವಾಗಿ ವಾರದಲ್ಲಿ ಎರಡು ದಿನ ಹುಬ್ಬಳ್ಳಿಯಲ್ಲಿ ಹಾಗೂ ಉಳಿದ ದಿನ ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಬೆಳಗಾವಿಗೆ ಮಂತ್ರಿಗಳ ಭೇಟಿ, ಪ್ರಗತಿ ಪರಿಶೀಲನೆ ಸಭೆ, ಇತರೆ ಪ್ರಮುಖ ಕೆಲಸಗಳ ಒತ್ತಡ ಇದ್ದಾಗ ವಾರಕ್ಕೆರಡು ದಿನ ಇಲ್ಲಿ ಹಾಜರಿರಲೂ ಅವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಪಿಎಂಸಿ ಆಡಳಿತ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಪ್ರಾಂಗಣದಲ್ಲಿ ಹತ್ತಾರು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಪೂರ್ಣಗೊಂಡ ಕೆಲಸಕ್ಕೆ ಸಂಬಂಧಿಸಿ ಗುತ್ತಿಗೆದಾರರಿಗೆ ಬಿಲ್ ಪಾವತಿಸುವುದು, ಕೆಲವು ಪ್ರಮುಖ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಸೇರಿ ಅನೇಕ ಕೆಲಸಗಳು ಬಾಕಿ ಉಳಿದಿವೆ. ಬಿಲ್ ಮೊತ್ತಕ್ಕಾಗಿ ಗುತ್ತಿಗೆದಾರರು ಕಚೇರಿಗೆ ಅಲೆದಾಡಿ ಬೇಸತ್ತಿದ್ದು, ಕೆಲವರು ಕೋರ್ಟ್ ಕಟಕಟೆ ಏರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಎಪಿಎಂಸಿ ಆಡಳಿತ ಮಂಡಳಿ ಸದಸ್ಯರು.
ಸಿಬ್ಬಂದಿ ಕೊರತೆಗೆ ಪರಿಹಾರ, ಶಾಶ್ವತ ಆದಾಯ ಮೂಲವನ್ನೂ ಕಂಡುಕೊಳ್ಳುವ ಪ್ರಸ್ತಾವನೆಗಳನ್ನು ಅಂತಿಮಗೊಳಿಸುವುದು ಸೇರಿ ಪ್ರಮುಖ ಕೆಲಸಗಳು ಐದಾರು ತಿಂಗಳ ಹಿಂದೆ ಹೇಗಿದ್ದವೋ ಈಗಲೂ ಹೆಚ್ಚುಕಡಿಮೆ ಹಾಗೇ ಇವೆ. ದರ ಕುಸಿತ ಇತ್ಯಾದಿ ಕಾರಣದಿಂದ ರೈತರ ಪ್ರತಿಭಟನೆ ಮೊದಲಾದ ತುರ್ತು ಸಂದರ್ಭಗಳನ್ನು ನಿಭಾಯಿಸುವ ಸವಾಲು ಸಹ ಆಗಾಗ ಎದುರಾಗುತ್ತದೆ. ಹೀಗಾಗಿ ಅನುಭವಿ ಕಾರ್ಯದರ್ಶಿಯನ್ನು ಸರ್ಕಾರ ಕಾಯಂ ಆಗಿ ನೇಮಿಸಬೇಕು ಎನ್ನುತ್ತಾರೆ ಆಡಳಿತ ಮಂಡಳಿಯವರು.
ನಮ್ಮದು ರಾಜ್ಯದ ಅತ್ಯಂತ ದೊಡ್ಡ ಎಪಿಎಂಸಿ ಪ್ರಾಂಗಣ. ಇಲ್ಲಿ ಪೂರ್ಣಕಾಲಿಕ ಕಾರ್ಯದರ್ಶಿ ಇಲ್ಲದೇ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ವಾರದಲ್ಲಿ ಒಮ್ಮೆ, ಎರಡು ಸಾರಿ ಬಂದರೆ ಎಲ್ಲ ಕೆಲಸ ಪೂರೈಸಲು ಆಗುವುದಿಲ್ಲ. ಸರ್ಕಾರದೊಂದಿಗೆ ಪತ್ರ ವ್ಯವಹಾರ, ಮಾತುಕತೆ ನಡೆಸುವವರು ಇಲ್ಲದೇ ರೈತ ಪ್ರತಿನಿಧಿಗಳಾಗಿ ನಾವು ಕೈಗೊಂಡ ತೀರ್ವನಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಸರ್ಕಾರ ಆದಷ್ಟು ಬೇಗ ಪೂರ್ಣಕಾಲಿಕ ಕಾರ್ಯದರ್ಶಿಯನ್ನು ನೇಮಿಸಬೇಕು.| ಸಹದೇವಪ್ಪ ಸುಡಕೇನವರ, ಎಪಿಎಂಸಿ ಅಧ್ಯಕ್ಷ, ಹುಬ್ಬಳ್ಳಿ