

ವಿಜಯಪುರ: ಕವಿ ಚಾಮರಸ ಬರೆದ ‘ಪ್ರಭುಲಿಂಗ ಲೀಲೆ’ ಒಂದು ಅದ್ಭುತ ಕಾವ್ಯ. ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರವೆಂಬ ಅರಿಷಡ್ವರ್ಗಗಳನ್ನು ಗೆಲ್ಲುವ ಶಕ್ತಿ ಈ ಕಾವ್ಯಕ್ಕಿದೆ ಎಂದು ತ್ರಿವಿಧ ದಾಸೋಹಿ, ಗದುಗಿನ ಜಗದ್ಗುರು ತೋಂಟದ ಡಾ.ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ನಗರದ ತೋಂಟದಾರ್ಯ ಅನುಭವ ಮಂಟಪದಲ್ಲಿ ಶ್ರಾವಣ ಮಾಸ ಹಾಗೂ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಚಾಮರಸ ವಿರಚಿತ ಪ್ರಭುಲಿಂಗ ಲೀಲೆ ಪ್ರವಚನದ ಮಂಗಲ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಭಾನುವಾರ ಸಂಜೆ ಅವರು ಆಶೀರ್ವಚನ ನೀಡಿದರು.
ಪ್ರಭುಲಿಂಗ ಲೀಲೆ ಸತ್ತವರ ಕಥೆಯಲ್ಲ, ಬಸವಾದಿ ಶರಣ- ಶರಣೆಯರ ಜೀವನ ಚರಿತ್ರೆ ತಿಳಿಸುವ ಒಂದು ಶ್ರೇಷ್ಠ ಕಾವ್ಯ. ಅದು ನಮಗೆ ದಿವ್ಯಾನಂದದ ರಸವನ್ನು ಉಣಬಡಿಸುತ್ತದೆ ಎಂದರು.
ಶರಣರ ಜೀವನ ಚರಿತ್ರೆಯನ್ನು ಚಾಮರಸ ಪ್ರಭುಲಿಂಗಲೀಲೆಯಲ್ಲಿ ಬಹಳ ರಸವತ್ತಾಗಿ ಬರೆದಿದ್ದಾನೆ. ಪ್ರಭುಲಿಂಗ ಲೀಲೆ ಕೇಳುವುದರಿಂದ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳು ಮೂಡುತ್ತವೆ. ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಾವೂ ಶರಣರಾಗಿ ಬಾಳುತ್ತೇವೆ. ಪ್ರಭುಲಿಂಗ ಲೀಲೆ ಕೇಳಿದ ಅನೇಕರು ತಮ್ಮ ಬದುಕಿನಲ್ಲಿ ಪರಿವರ್ತನೆ ಕಂಡುಕೊಂಡಿದ್ದಾರೆ ಎಂದು ಹೇಳಿದರು.
ಚಾಮರಸ ಪ್ರಭುಲಿಂಗ ಲೀಲೆ ಕಾವ್ಯ ಬರೆದ ಮೇಲೆ ಆ ಕಾಲದ ಅರಸನಾದ ಪ್ರೌಢದೇವರಾಯ ಅದನ್ನು ಆನೆಯ ಮೇಲೆ ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಿ ಕನಕವೃಷ್ಟಿ ಮಾಡಿದ್ದಾನೆಂದರೆ ಈ ಕಾವ್ಯ ಎಂಥ ಮಹತ್ವದ್ದು ಎಂಬುದನ್ನು ನಾವೆಲ್ಲರೂ ಗಮನಿಸಬೇಕು. ಸಾಧಕರಾದವರು ಅಹಂಕಾರದಿಂದ ಮುಕ್ತನಾಗಿರಬೇಕು ಎಂಬ ಸಂದೇಶವನ್ನು ಪ್ರಭುಲಿಂಗ ಲೀಲೆ ತಿಳಿಸುತ್ತದೆ. ಪ್ರಭುಲಿಂಗ ಲೀಲೆ ಕೇವಲ ಸಂಸಾರಿಗಳು, ಗ್ರಹಸ್ಥರಿಗಷ್ಟೇ ಅಲ್ಲದೇ, ವಿರಕ್ತರೆನಿಸುವ ಸ್ವಾಮೀಜಿಗಳಿಗೂ ರಾಜಮಾರ್ಗವನ್ನು ತೋರಿಸುತ್ತದೆ ಎಂದರು.
ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೇಷ್ಠ ಪ್ರವಚನಕಾರರು, ಅಪೂರ್ವ ವಾಗ್ಮಿಗಳಾದ ಅಥಣಿ ತಾಲೂಕು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಶ್ರೀಗಳು ಪ್ರವಚನದ ಮಂಗಲ ನುಡಿಗಳನ್ನಾಡಿ, ಸಾಮಾಜೀಕರಣದ ಮೂಲಕ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ಬಸವಾದಿ ಶರಣರ ವಚನಗಳನ್ನು ಎಲ್ಲರೂ ಪ್ರತಿನಿತ್ಯ ಓದಿ ತಮ್ಮ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬೇಕು. ಮನೆಯಲ್ಲಿ ಮಕ್ಕಳಿಗೂ ವಚನಗಳನ್ನು ಹೇಳಿಕೊಡಬೇಕು. ಆ ಮೂಲಕ ’ಬಸವ ಸಂಸ್ಕೃತಿ’ ಯನ್ನು ಉಳಿಸಿ- ಬೆಳೆಸಬೇಕು ಎಂದು ಹೇಳಿದರು.
ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತೋಂಟದಾರ್ಯ ಅನುಭವ ಮಂಟಪದ ಉಪಾಧ್ಯಕ್ಷ ಎಂ.ಎಸ್. ರುದ್ರಗೌಡ, ಖಜಾಂಚಿ ಜಿ.ಎಸ್. ಜೋಗೂರ, ಸದಸ್ಯ ಎಸ್.ಕೆ. ಇಂಗಳೇಶ್ವರ, ಎಸ್.ಆರ್. ಸೂಳಿಭಾವಿ, ವಿ.ಎಸ್. ಹೇರಲಗಿ, ಎಸ್.ಜಿ. ಗಡಗಿ, ಆರ್.ಪಿ. ಹಿರೇಮಠ, ಎಸ್.ಆರ್. ಗದಗ, ಸಿ.ಎಸ್. ಪಾಟೀಲ ಮತ್ತಿತರರಿದ್ದರು.
ಕಾರ್ಯಾಧ್ಯಕ್ಷ ಎಸ್.ಎಚ್. ನಾಡಗೌಡ ಸ್ವಾಗತಿಸಿದರು. ಕಾರ್ಯದರ್ಶಿ ಎನ್.ಕೆ. ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ದಶಮಾನೋತ್ಸವದ ಅಂಗವಾಗಿ ಹೊರತಂದ ’ದಶ ದರ್ಶನ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಾಹಿತಿಗಳಾದ ಮೋಹನ ಕಟ್ಟಿಮನಿ, ಗಣೇಶ ಅಮೀನಗಡ ಅವರನ್ನು ಸನ್ಮಾನಿಸಲಾಯಿತು.