ಅಲ್ಲಿದ್ದಾಗ ಎಸ್‌ಟಿ ಆಗಿದ್ದ ಈ ಮಂತ್ರಿ ಇಲ್ಲಿಗೆ ಬಂದು ಎಸ್‌ಸಿ ಆದರಂತೆ!

Prabhu c
Published on

ಚಿತ್ರದುರ್ಗ: ಮೂಲತಃ ಮಹಾರಾಷ್ಟ್ರದವರಾದ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಬೀದರ್ ಜಿಲ್ಲೆಗೆ ಬಂದು ಪರಿಶಿಷ್ಟ ಜಾತಿಯ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದಾರಂತೆ!

ಈ ರೀತಿ ಆರೋಪ ಮಾಡಿದವರು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಚ್. ಆಂಜನೇಯ. ‘‘ನಕಲಿ ಜಾತಿ ಪ್ರಮಾಣ ಪತ್ರ ನೀಡಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಚಿವ ಪ್ರಭು ಚೌವ್ಹಾಣ್ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡಲೇ ಮಂತ್ರಿ ಸ್ಥಾನದಿಂದ ಕೈಬಿಡಬೇಕು’’ ಎಂಬುದು ಅವರ ಒತ್ತಾಯ.

‘‘ಚೌವ್ಹಾಣ್ ಅವರು ಮೀಸಲಾತಿ ಮೇಲೆ ದೌರ್ಜನ್ಯ ನಡೆಸಿದ್ದರೂ ಮೂಲ ಲಂಬಾಣಿಗರು ವಿರೋಧಿಸದೆ ಏಕೆ ಸುಮ್ಮನಿದ್ದಾರೆ? ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಂಕರ್ ಜೋಗಿ ಎನ್ನುವವರು ಚೌವ್ಹಾಣ್ ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಎಂಬುದಾಗಿ ಆಕ್ಷೇಪಣೆ ಸಲ್ಲಿಸಿದ್ದರೂ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸದ ಕಾರಣ ಇಂದು ಪ್ರಭು ಚೌವ್ಹಾಣ್ ಮಂತ್ರಿಯಾಗಿ ಮೀಸಲಾತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಬೀದರ್ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದರೂ ಹಿಂದಿನ ಜಿಲ್ಲಾಧಿಕಾರಿ ಹಾಗೂ ಈಗಿನ ಜಿಲ್ಲಾಧಿಕಾರಿ ಯಾವ ಕ್ರಮವನ್ನೂ ಕೈಗೊಳ್ಳದೆ ಮೂಕ ಪ್ರೇಕ್ಷಕರಾಗಿದ್ದಾರೆ’’ ಎಂಬ ಗಂಭೀರ ಆರೋಪವನ್ನೂ ಆಂಜನೇಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net