

ಕೆ.ಎಂ.ದೊಡ್ಡಿ: ಇ-ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಕೆ.ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ದಯಾನಂದ ಸೋಮವಾರ ರಾತ್ರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಖಾತೆ ಮಾಡಿಕೊಡುವ ಸಂಬಂಧ ಹನುಮಂತನಗರದ ಅಶ್ವತ್ಥ್ ಅವರಿಂದ 25 ಸಾವಿರ ರೂ. ಲಂಚ ಕೇಳಿದ್ದಾರೆಂದು ತಿಳಿದುಬಂದಿದೆ. ಅದರಂತೆ ಈಗಾಗಲೇ 13 ಸಾವಿರ ರೂ.ಗಳನ್ನು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲಾಯಿತು. ಇತ್ತ ಅಶ್ವತ್ಥ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ರಾತ್ರಿ ಹನುಮಂತನಗರದ ರಸ್ತೆ ಬದಿಯೇ ಎಂಟು ಸಾವಿರ ರೂ.ನಗದು ಪಡೆಯುವ ವೇಳೆ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಜಯರತ್ನಾ, ಸಿಬ್ಬಂದಿ ಶರತ್, ಶಂಕರ್, ದಿನೇಶ್, ಯೋಗೇಶ್, ನವೀನ, ರಾಮಲಿಂಗು ನೇತೃತ್ವದಲ್ಲಿ ದಾಳಿ ನಡೆಸಿ ಪಿಡಿಒ ದಯಾನಂದ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.