

ಹರಿಹರ: ರಾಜ್ಯದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಉತ್ತಮ ಜೀವನ ನಡೆಸುವಂತಾಗಬೇಕು ಎನ್ನುವ ದೃಷ್ಟಿಯಿಂದ ಅಕ್ಕ ಕೆಫೆ ಕ್ಯಾಂಟಿನ್ ಯೋಜನೆ ಆರಂಭಿಸಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಪಕ್ಕದ ಯುವಜನ ಸೇವೆ ಕ್ರೀಡಾ ಇಲಾಖೆ ವಾಣಿಜ್ಯ ಸಂಕೀರ್ಣದಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿಯಲ್ಲಿ ಅರಂಭಿಸಿದ ಅಕ್ಕ ಕೆಫೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ಪ್ರಸಕ್ತ ಬಜೆಟ್ನಲ್ಲಿ ಘೊಷಿಸಿದಂತೆ ರಾಜ್ಯದಲ್ಲಿ 50 ಅಕ್ಕ ಕೆಫೆ ಆರಂಭಿಸಿದೆ. ದಾವಣಗೆರೆಯ ಅರುಣ ಚಿತ್ರ ಮಂದಿರದ ಬಳಿ ಹಾಗೂ ಹರಿಹರದಲ್ಲಿ ಒಂದು ಕೆಫೆ ಆರಂಭಿಸಿದೆ. ಕೈಗೆಟುವ ದರದಲ್ಲಿ ಶುಚಿ, ರುಚಿಯಾದ ಆಹಾರ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ಮಹಿಳೆಯರ ಸಬಲತೆ ದೃಷ್ಟಿಯಿಂದ ಸರ್ಕಾರವೇ 15 ಲಕ್ಷ ರೂ. ವೆಚ್ಚ ಮಾಡಿ ಕೆಫೆಯಲ್ಲಿ ಹೋಟಲ್ಗೆ ಬೇಕಾದ ಪರಿಕರಗಳನ್ನು ರೂಪಿಸಿದೆ. ಸ್ವಸಹಾಯ ಸಂಘಕ್ಕೆ ಈ ಮಳಿಗೆಯನ್ನು ಉಚಿತವಾಗಿ ನೀಡಲಾಗಿದೆ. ಉತ್ತಮವಾಗಿ ನಡೆಸಿಕೊಂಡು ಹೋದರೆ ಸಂಘಕ್ಕೆ ಕೆಫೆ ನಿರ್ವಹಣೆ ಜವಾಬ್ದಾರಿ ನೀಡಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಎಸ್. ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಶಾಸಕ ಬಿ.ಪಿ.ಹರೀಶ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಸದಸ್ಯರಾದ ಎಂ.ಆರ್. ಮುಜಮ್ಮಿಲ್ (ಬಿಲ್ಲು), ಸೈಯದ್ ಅಬ್ದುಲ್ ಅಲೀಂ, ಕೆ.ಬಿ. ರಾಜಶೇಖರ್, ಸಂತೋಷ್ ದೊಡ್ಮನಿ, ಜೆಡಿಎಸ್ ಮುಖಂಡ ಮಾರುತಿ ಬೇಡರ್, ಜಿಪಂ ಸಿಇಒ ಸುರೇಶ್ ಬಿ. ಹಿಟ್ನಾಳ್, ತಹಸೀಲ್ದಾರ್ ಗುರುಬಸವರಾಜ್, ತಾಪಂ ಇಒ ಸುಮಲತಾ ಹಾಗೂ ಇತರರಿದ್ದರು.