ಐಸಿಎಆರ್ ನಿಲುವು ರೈತ ವಿರೋಧಿ

kissan sangha
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಮುಂದಾಗಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)ಯ ನಿಲುವು ರೈತ ವಿರೋಧಿಯಾಗಿದೆ ಎಂದು ಭಾರತೀಯ ಕಿಸಾನ ಸಂಘದ ಪ್ರಧಾನ ಕಾರ್ಯದರ್ಶಿ ಮೋಹಿನಿ ಮೋಹನ ಮಿಶ್ರಾ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಸಿಎಆರ್​ನ ಹಿರಿಯ ವಿಜ್ಞಾನಿಗಳು ಹಲವು ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕೃಷಿ ಕ್ಷೇತ್ರದ ಸಂಶೋಧನೆಯಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಬಯಸುವುದರಿಂದ ಈ ವಿಜ್ಞಾನಿಗಳು ಮಹತ್ವ ಕಳೆದುಕೊಳ್ಳಲಿದ್ದಾರೆ. ಅವರಿಗೆ ಅನಾನುಕೂಲಕರ ಪರಿಸ್ಥಿತಿ ನಿರ್ವಣವಾಗಲಿದೆ ಹಾಗೂ ಅಭದ್ರತೆ ಕಾಡಲಿದೆ. ದೊಡ್ಡ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಇದರಿದ ಐಸಿಎಆರ್ ರೈತರಿಂದ ದೂರವಾಗಲಿದೆ ಎಂದರು.

ಹುಬ್ಬಳ್ಳಿಯಲ್ಲಿ ಅ. 11ರಂದು ನಡೆದ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿಯಲ್ಲಿ ಹಾಗೂ 12 ಮತ್ತು 13ರಂದು ನಡೆದ ಅಖಿಲ ಭಾರತ ಪ್ರಬಂಧ ಸಮಿತಿ ಸಭೆಯಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವ ನಿಲುವನ್ನು ಐಸಿಎಆರ್ ಕೈಬಿಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು ಹಾಗೂ ಐಸಿಎಆರ್ ಸ್ವತಂತ್ರವಾಗಿ ಸಂಶೋಧನೆ ಕೈಗೊಳ್ಳಲು ಸಾಕಷ್ಟ ಅನುದಾನ ಒದಗಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ಈ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಅಗತ್ಯವಿಲ್ಲ ಎಂಬುದು ನಮ್ಮ ನಿಲುವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net