

ಉಡುಪಿ: ಮ್ಯಾನೇಜ್ಮೆಂಟ್ ಕೋರ್ಸ್ಗಳ ವಿದ್ಯಾರ್ಥಿಗಳು ಬೇರೆ ಕಂಪನಿಗಳಲ್ಲಿ ಉದ್ಯೋಗಿಗಳಾಗಿ ಸೇರ್ಪಡೆಗೊಳ್ಳುವ ಬದಲು ಸ್ಟಾರ್ಟ್ಅಪ್ಗಳ ಮೂಲಕ ಉದ್ಯಮಿಗಳಾಗಲು ಪ್ರಯತ್ನಿಸಬೇಕು. ಕೇಂದ್ರ ಸರ್ಕಾರ ಬಹಳಷ್ಟು ಸಹಾಯಧನ ನೀಡುತ್ತಿದ್ದು, ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಅವಕಾಶ ಲಭ್ಯವಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಡುಪಿ ಚೇಂಬರ್ ಅಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್ ನಾಯಕ್ ಹೇಳಿದರು.
ಬುಧವಾರ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಪಿ.ಐ.ಎಂ) ಸಂಸ್ಥೆಯ ಎಂ.ಬಿ.ಎ ಹಾಗೂ ಎಂ.ಸಿ.ಎ ವಿದ್ಯಾರ್ಥಿಗಳಿಗಾಗಿ ಒಂದು ದಿನದ ರಾಷ್ಟ್ರೀಯ ಮಟ್ಟದ ಆಡಳಿತ ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಹಾಗೂ ಸಾಂಸತಿಕ ಸ್ಪರ್ಧೆ ಅದ್ವೈತ 2ಕೆ24 ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ವರ್ಷ ಅತೀ ಹೆಚ್ಚಿನ ವಿದ್ಯಾರ್ಥಿಗಳು ತೇರ್ಗಡೆ ಪಡೆದು ಹೊರಬರುತ್ತಿದ್ದಾರೆ. ಆದರೆ ಉದ್ಯೋಗಕ್ಕಾಗಿ ಹೊರ ಜಿಲ್ಲೆ, ರಾಜ್ಯವನ್ನು ಆಶ್ರಯಿಸುವ ಪರಿಸ್ಥಿತಿ ಇದೆ. ಹೀಗಾಗಿ ಜಿಲ್ಲೆಯಲ್ಲಿ ಕನಿಷ್ಠ 10 ಸಾವಿರ ಮಂದಿಗೆ ಉದ್ಯೋಗ ಸಿಗುವಂತಾಗಬೇಕು. ಹೆತ್ತವರಿಗೂ ಮಕ್ಕಳು ಜೊತೆಯಲ್ಲಿ ಇರುವುದರಿಂದ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಚೇಂಬರ್ ಆ್ ಕಾಮರ್ಸ್ ಕಾರ್ಯಯೋಜನೆ ರೂಪಿಸಬೇಕು ಎಂದರು.
ಕರ್ನಾಟಕ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ವಾದಿರಾಜ್ ಭಟ್, ಸಂಸ್ಥೆಯ ನಿರ್ದೇಶಕ ಡಾ. ಪಿ. ಎಸ್. ಐತಾಳ್, ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್, ಸಂಯೋಜಕರಾದ ಡಾ. ನವೀನ್ ಕುಮಾರ್, ಶಿವಾನಂದ ಭಂಡಾರ್ಕರ್, ವಿದ್ಯಾರ್ಥಿನಿ ಅಶ್ವಿನಿ ಎಂ.ಕೆ., ವಿದ್ಯಾರ್ಥಿ ಆದರ್ಶ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.