

ಉಡುಪಿ: ಶಾಲಾ ಹಂತದಲ್ಲಿ ಮಕ್ಕಳನ್ನು ಕ್ರೀಡಾಕ್ಷೇತ್ರಕ್ಕೆ ಬರಮಾಡಿಕೊಳ್ಳುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಕಾಲೇಜು ವಿದ್ಯಾರ್ಥಿಗಳನ್ನು ಸ್ಪೋರ್ಟ್ಸ್ ಕಲ್ಚರ್ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಡ್ರಗ್ಸ್ ಮುಂತಾದ ದುಶ್ಚಟಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ಪೂರ್ಣಪ್ರಜ್ಞ ಕಾಲೇಜಿನ ಶ್ರೀ ವಿಬುಧೇಶತೀರ್ಥ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಹೊನಲು ಬೆಳಕಿನ ಖೋ&-ಖೋ ಪಂದ್ಯಾಟ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತದ 200 ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಚೀನಾ 1980ರವರೆಗೆ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿಲ್ಲ. ಆದರೂ ಕಳೆದ ಒಲಂಪಿಕ್ನಲ್ಲಿ ಚೀನಾ 727 ಪದಕಗಳನ್ನು ಪಡೆದರೆ 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಕೇವಲ 41 ಪದಕಗಳನ್ನು ಗಳಿಸಲು ಶಕ್ತವಾಗಿದೆ. ಭಾರತದಲ್ಲಿ ಕ್ರೀಡಾ ಕ್ಷೇತ್ರ ಬಹಳಷ್ಟು ಹಿಂದುಳಿದಿದ್ದು, ಶಾಲಾ ಮಟ್ಟದಲ್ಲೇ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಅನಿವಾರ್ಯವಾಗಿದೆ. ಕೇಂದ್ರ ಸರ್ಕಾರ ಸ್ಥಳಿಯ ಹಂತದಲ್ಲೇ ಕ್ರೀಡೆಯನ್ನು ಉತ್ತೇಜಿಸಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಕ್ರೀಡಾ ಬಜೆಟ್ 3 ಪಟ್ಟು ಏರಿಕೆಯಾಗಿದೆ.
2036ರ ಒಲಿಂಪಿಕ್ಸ್ಗೆ ಸಿದ್ಧರಾಗಿ
ಕ್ರೀಡಾಳುಗಳಿಗಾಗಿ ವಿದೇಶಗಳಲ್ಲಿ ಸಣ್ಣ ಸಣ್ಣ ನಗರಗಳಲ್ಲಿಯೂ ಸ್ಟೇಡಿಯಂಗಳು 24 ಗಂಟೆ ತೆರೆದಿರುತ್ತವೆ. ಭಾರದಲ್ಲೂ ಈ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. 2036ಕ್ಕೆ ಭಾರತದಲ್ಲಿ ಒಲಂಪಿಕ್ಸ್ ಸ್ಪರ್ಧೆ ನಡೆಯುವ ಸಾಧ್ಯತೆಗಳಿದ್ದು, ಇದಕ್ಕೆ ಈಗಾಗಲೇ ಯುವ ತಂಡ ಸಿದ್ಧವಾಗಬೇಕು. ಕನಿಷ್ಠ 100 ಪದಕ ಪಡೆಯುವ ಗುರಿ ಹೊಂದಬೇಕು. 2008 ಚೀನಾ ಒಲಂಪಿಕ್ಸ್ ಆಯೋಜಿಸಿ 100 ಪದಕಗಳನ್ನು ಬಾಚಿಕೊಂಡಿತ್ತು ಎಂದರು.
ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಕ್ರೀಡಾಕೂಟ ಉದ್ಘಾಟಿಸಿದರು. ಅದಮಾರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ ಶೆಟ್ಟಿ, ಅದಮಾರು ಮಠ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎ.ಪಿ.ಭಟ್, ಖಜಾಂಜಿ ಸಿ.ಎ., ಪ್ರಶಾಂತ್ ಹೊಳ್ಳ, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಕಿಶೋರ್ ಕುಮಾರ್ ಸಿ.ಕೆ., ಕ್ರೀಡಾಕೂಟ ಸಂಚಾಲಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ, ಕರ್ಣಾಟಕ ಬ್ಯಾಂಕಿನ ಸಿಇಓ ಕೃಷ್ಣನ್ ಎಚ್. ಉಪಸ್ಥಿತರಿದ್ದರು. ಕಾಲೇಜಿನ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ರಾವ್ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ರಾಮು ಎಲ್. ವಂದಿಸಿದರು.