

ಉಡುಪಿ: ಭಾರತೀಯ ಸಂಸ್ಕೃತಿಯನ್ನು ನಷ್ಟ ಮಾಡುವ ಪ್ರಯತ್ನವನ್ನು ಪರಕೀಯರು ಮಾಡಿದರೂ ಯಶಸ್ಸು ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ೧೯೪೭ರಲ್ಲಿ ಅವರು ಹೊರಟು ಹೋದ ಬಳಿಕ ನಮ್ಮನವರೇ ದೇಶೀಯ ಜೀವನ ಪದ್ಧತಿ ನಷ್ಟಗೊಳಿಸುವ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ ಎಂದು ಮಹಾರಾಷ್ಟ್ರದ ಕೊಲ್ಹಾಪುರ ಶ್ರೀಕನ್ಹೇರಿ ಮಠದ ಶ್ರೀಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.
ಬುಧವಾರ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅದಮಾರು ಮಠ, ಶ್ರೀಕೃಷ್ಣ ಸೇವಾ ಬಳಗದ ವತಿಯಿಂದ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕಳೆದ ೭೫ ವರ್ಷದಲ್ಲಿ ಭಾರತೀಯ ಸಂಸ್ಕೃತಿ ಹೊರಗಿನಿಂದ ಘಟ್ಟಿಯಾಗಿ ಕಂಡರೂ ಒಳಗೆ ಟೊಳ್ಳಾಗಿದೆ. ಯಾವ ಸಮಯದಲ್ಲಿ ಬೇಕಾದರೂ ಮುರಿದು ಬೀಳಬಹುದು ಎಂಬ ಎಚ್ಚರ ಅತೀ ಅಗತ್ಯ. ಪ್ರಪಂಚದಲ್ಲಿ ೧೦ ಸಾವಿರ ಇತಿಹಾಸ ಇರುವ ೨೩ ಪ್ರಾಚೀನ ಸಂಸ್ಕೃತಿಗಳಲ್ಲಿ ಈಗ ಕೇವಲ ೨ ಉಳಿದಿದೆ. ಬ್ರಿಟೀಷರ ದಾಖಲೆಗಳ ಪ್ರಕಾರ ದೇಶದ ೭ ಲಕ್ಷ ಹಳ್ಳಿಗಳಲ್ಲಿ ಪ್ರತೀ ಗ್ರಾಮದಲ್ಲಿ ಶಾಲೆಗಳಿದ್ದವು. ೧೬ ಸಾವಿರ ಗುರುಕುಲಗಳಿದ್ದವು. ದಕ್ಷಿಣದಲ್ಲಿ ಶೇ. ೯೪ ಮತ್ತು ಉತ್ತರದಲ್ಲಿ ಶೇ. ೯೨ ಮಂದಿ ಸಾಕ್ಷರರಾಗಿದ್ದರು. ೪೦ ವಿದ್ಯೆ, ೬೪ ಕಲೆಗಳನ್ನೊಳಗೊಂಡ ಭಾರತೀಯ ಶಿಕ್ಷಣ ಪದ್ಧತಿ ಸಂವೇದನಾಶೀಲತೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮಕ್ಕೆ ಹೆಸರುವಾಸಿಯಾಗಿತ್ತು ಎಂದು ಹೇಳಿದರು.
ಪ್ರಾಚೀನ ಭಾರತದಲ್ಲಿ ಅನ್ನ, ನೀರು, ಔಷಧ, ವಿದ್ಯೆ ಮಾರಬಾರದೆಂಬ ನಿಯಮವಿತ್ತು. ಒಂದು ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಬಂದರೆ ಇಡೀ ಊರಿಗೆ ಬೆಂಕಿ ಹಚ್ಚಿ ಬೇರೆಕಡೆ ಜೀವನ ಮಾಡುತ್ತಿದ್ದರು. ನವಧಾನ್ಯಗಳನ್ನು ಬಿತ್ತಿ ಯಾವ ಬೆಳೆ ಈ ಮಣ್ಣಿನಲ್ಲಿ ಬೆಳೆಯುತ್ತದೆ ಎಂಬುದನ್ನು ಪರೀಕ್ಷಿಸುತ್ತಿದ್ದರು. ಗ್ರಾಮವನ, ರಾಜವನ, ದೇವವನ, ವೈದ್ಯವನ ಪರಿಕಲ್ಪನೆಯಲ್ಲಿ ಅರಣ್ಯ ಬೆಳೆಸುತ್ತುದ್ದರು. ಮನೆಗಳು ಪರಸ್ಪರ ಆವಲಂಬಿತವಾಗಿದ್ದು, ಗ್ರಾಮ ಸ್ವಾವಲಂಬಿAಯಾಗಿತ್ತು. ದೇಶದ ಮೇಲೆ ನಿರಂತರ ಆಕ್ರಮಣಗಳಿಂದ ಪ್ರಾಚೀನ ಜೀವನ ಪದ್ಧತಿ ಕುಸಿತವಾಗಿದ್ದು, ಈಗಿನ ಆಣುಪರಿವಾರದಲ್ಲಿ ಹಿರಿಯರಿಗೆ ಗೌರವ ಕಡಿಮೆಯಾದೆ. ಸ್ವಾರ್ಥ ಹೆಚ್ಚಾಗಿದೆ. ಶ್ರೀಮಠದಿಂದ ೧೦೦ ಆತ್ಮ ನಿರ್ಭರ ಗ್ರಾಮ ನಿರ್ಮಾಣಕ್ಕೆ ಉದ್ದೇಶಿಸಿ, ಸರ್ವೆ ಮಾಡಿಸಿದಾಗ ದಿನವಹಿ ಬಳಸುವ ೪೦೦ ಪದಾರ್ಥಗಳಲ್ಲಿ ಶೇ.೫ರಷ್ಟು ಕೂಡ ಆ ಗ್ರಾಮಗಳಲ್ಲಿ ಉತ್ಪಾದನೆಯಾಗುತ್ತಿಲ್ಲ ಎಂಬ ಸಂಗತಿ ಅಶ್ಚರ್ಯತರಿಸಿದೆ ಎಂದು ಶ್ರೀಗಳು ಹೇಳಿದರು.
ಗುರುಕುಲದಲ್ಲಿ ೧೦೦ಬಾಲಕಿಯರು ಹಾಗೂ ೧೫೦ ಬಾಲಕರಿಗೆ ೪೦ವಿದ್ಯೆ, ೬೪ಕಲೆಗಳನ್ನು ಖಗೋಲ, ಆಯುರ್ವೇದ, ಅಂತ್ಯಾಕ್ಷರಿ, ಯುದ್ಧ ಕಲೆ, ಗಣಿತ, ಶಿಲ್ಪಶಾಸ, ಸಂಗೀತ ಮಾತ್ರವಲ್ಲ ದೃತರಾಷ್ಟ್ರನಿಗೆ ಸಂಜಯ ಯುದ್ಧರಂಗದ ಸನ್ನಿವೇಶಗಳನ್ನು ತಿಳಿಸುತ್ತಿದ ಮಾದರಿಯ ವಿದ್ಯೆಯನ್ನೂ ಹೇಳಿಕೊಡಲಾಗುತ್ತಿದೆ. ಜನ ಹೆಮ್ಮೆಪಡುವಂತಹ ಪ್ರಾಚೀನ ಜ್ಞಾನ ಅರಿತು ಹೊಸ ತಂತ್ರಜ್ನಾನದ ಜೊತೆಗೆ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭ ಪ್ರಾಂಶುಪಾಲ ಡಾ. ಎ. ರಾಘವೇಂದ್ರ, ಡಾ. ಎ. ಪಿ. ಭಟ್, ಪುರುಷೋತ್ತಮ ಅಡ್ವೆ, ರಾಘವೇಂದ್ರ ಉಪ್ಪೂರು, ಗೋವಿಂದರಾಜ್, ಸುವರ್ಧನ್ ನಾಯಕ್, ಪ್ರದೀಪ್ ರಾವ್ ಉಪಸ್ಥಿತರಿದ್ದರು. ಗೋವಿಂದರಾಜ್ ಸ್ವಾಗತಿಸಿದರು. ಡಾ. ರಮೇಶ್ ನಿರೂಪಿಸಿದರು. ಸಿಎ ಗಣೇಶ್ ಹೆಬ್ಬಾರ್ ವಂದಿಸಿದರು.