

ವಿಟ್ಲ: ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಟ್ರಾಫಿಕ್ ಸಮಸ್ಯೆ ಒಮ್ಮೆ ಸರಿಯಾಗಿದ್ದು, ಈಗ ಮತ್ತೆ ಸಮಸ್ಯೆ ಪ್ರಾರಂಭವಾಗುತ್ತಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹೇಳಿದರೆ ಗಣೇಶೋತ್ಸವ ಬಂದೋಬಸ್ತಿನ ಕಾರಣ ನೀಡುತ್ತಿದ್ದಾರೆ. ಖಾಸಗಿ ಬಸ್‌ಗಳೂ ಮತ್ತೆ ರಸ್ತೆಯಲ್ಲಿ ನಿಲ್ಲಿಸುವುದಕ್ಕೆ ಪ್ರಾರಂಭಿಸಿದ್ದಾರೆ. ಇದಕ್ಕೆ ಪಂಚಾಯಿತಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿದ ವಿಚಾರದ ಕಾನೂನು ಪ್ರಕ್ರಿಯೆಯನ್ನು ತಕ್ಷಣ ಮಾಡಬೇಕು. ಮುಂದಿನ ಸಾಮಾನ್ಯ ಸಭೆಯ ನಾಲ್ಕೈದು ದಿನ ಮೊದಲು ಮಾಡಿ ಪ್ರಯೋಜನವಿಲ್ಲ. ಸದಸ್ಯರಿಗೆ ನೀಡುವ ಅನುದಾನದ ಕ್ರೀಯಾ ಯೋಜನೆ ಮಾಡಿ ಗುತ್ತಿಗೆ ಹಾಕಲು ಅವಕಾಶ ನೀಡುವ ಕಾರ್ಯವಾಗಲಿ. ದೇವಸ್ಥಾನದ ಆಸುಪಾಸಿನಲ್ಲಿರುವ ಶೌಚಗೃಹದ ಸುತ್ತಮುತ್ತ ಸ್ವಚ್ಛ ಮಾಡಿ ಉದ್ಯಾನವನ ಮಾಡಿ ಸುಂದರವಾಗಿಸಬೇಕು. ವಿಟ್ಲದಲ್ಲಿ ತಲೆಯೆತ್ತುತ್ತಿರುವ ದೊಡ್ಡ ಕಟ್ಟಡಗಳ ಶೌಚ ತ್ಯಾಜ್ಯ ತೋಡಿಗೆ ಬಿಡುತ್ತಿದ್ದಾರೆ. ಇಂಗುಗುಂಡಿ ಮಾಡಬೇಕೆಂಬ ನಿಯಮವಿದ್ದರೂ ಇದನ್ನು ಗಾಳಿ ತೂರಲಾಗುತ್ತಿದೆ. ತೋಡಿನಲ್ಲಿ ನೀರಿನ ಹರಿವು ಇರುವಾಗ ಯಾವುದೇ ಸಮಸ್ಯೆಯಾಗದಿದ್ದರೂ, ನೀರಿಲ್ಲ ಸಮಯ ಗಬ್ಬುನಾರುತ್ತಿದೆ. ಪರವಾನಗಿ ನವೀಕರಣಕ್ಕೆ ಮೊದಲು ಸೂಕ್ತ ವ್ಯವಸ್ಥೆ ಮಾಡಿಸಬೇಕು. ಮುಖ್ಯ ರಸ್ತೆಯ ಚರಂಡಿ ಸ್ವಚ್ಛ ಮಾಡದೆ, ರಸ್ತೆಯಲ್ಲೇ ಕೊಚ್ಚೆ ನೀರು ಹರಿಯುತ್ತಿದೆ. ವಿದ್ಯಾರ್ಥಿಗಳು ಕೆಸರಿನ ಸ್ನಾನ ಮಾಡಿ ತರಗತಿಗಳಿಗೆ ಹೋಗಲಾದ ಸ್ಥಿತಿನಿರ್ಮಾಣವಾಗುತ್ತಿದೆ ಎಂದು ದೂರಿದರು.
ಉಪಾಧ್ಯಕ್ಷೆ ಸಂಗೀತ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಎಸ್., ಮುಖ್ಯಾಧಿಕಾರಿ ಕರುಣಾಕರ ವಿ. ಉಪಸ್ಥಿತರಿದ್ದರು.
ಸಭೆ ತಡ ಯಾಕೆ?
ಸಭೆಯನ್ನು ಸಮಯಕ್ಕೆ ಪ್ರಾರಂಭ ಮಾಡಬೇಕು. ಸಮಯಕ್ಕೆ ಬರಬೇಕಲ್ವಾ? ಸಭೆಯನ್ನು ಜನರಿಗೆ ಬೇಕಾಗಿ ಮಾಡುವುದಾ, ರಾಜಕೀಯದವರಿಗೆ ಬೇಕಾಗಿ ಮಾಡುವುದಾ? ಉಪಾಧ್ಯಕ್ಷರು ಬಂದಿರುವ ಕಾರಣ ಅವರ ನೇತೃತ್ವದಲ್ಲಿ ಸಭೆ ಪ್ರಾರಂಭಿಸಿ, ಇಲ್ಲಾ ವಿಪಕ್ಷದವರು ಸಭೆ ಬಹಿಷ್ಕರಿಸುವ ಎಂದು ಸದಸ್ಯ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ ಹೇಳಿದರು.
ಬೈಲಾ ಸಮಸ್ಯೆಯಿಂದ ಅಭಿವೃದ್ಧಿ ಶುಲ್ಕ ಪಾವತಿ ವಿಚಾರದಲ್ಲಿ ಸಮಸ್ಯೆಯಾಗುತ್ತಿದೆ. ತ್ವರಿತವಾಗಿ ಬೈಲಾ ಸಿದ್ಧಪಡಿಸುವ ಕಾರ್ಯ ನಡೆಯಬೇಕು. ಸಮಸ್ಯೆ ತೀವ್ರವಾದರೆ, ಬೈಲಾ ಬಳಿಕವೇ ಖಾತೆ ನೀಡುವ ಕಾರ್ಯವನ್ನು ಮಾಡಬೇಕಷ್ಟೆ.
| ಕರುಣಾಕರ ನಾಯ್ತೊಟ್ಟು ಪಟ್ಟಣ ಪಂಚಾಯಿತಿ ಅಧ್ಯಕ್ಷ
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎ ಹಾಗೂ ಬಿ ಖಾತೆ ನೋಂದಣಿ ಅಭಿಯಾನ ನಡೆದಿದ್ದು, ಶೇ.೨೪ರಷ್ಟು ಮಾತ್ರ ಆಗಿದೆ. ಎರಡನೇ ವಾರ್ಡ್‌ನಲ್ಲಿ ೩೫೪ ಖಾತೆ ಆಗುವ ಮೂಲಕ ಮೊದಲ ಸ್ಥಾನದಲ್ಲಿದೆ. ೧೩ನೇ ವಾರ್ಡ್‌ನಲ್ಲಿ ೧೮೯ ಖಾತೆ, ೩ನೇ ವಾರ್ಡ್ ನಲ್ಲಿ ೧೮೧ ಖಾತೆಯಾಗಿದೆ.
| ಕರುಣಾಕರ ವಿ. ಮುಖ್ಯಾಧಿಕಾರಿ