

ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆಯಲ್ಲಿ ನಡೆಯಿತು.
ಪೇಟೆಯಲ್ಲಿ ಕೆಲವು ದಿನಗಳಿಂದ ಸಂಚಾರ ವ್ಯವಸ್ಥೆ ಸರಿಯಾಗಿದ್ದು, ಮಂಗಳವಾರ ಬೆಳಗ್ಗೆ ಏಕಾಏಕಿ ರಿಕ್ಷಾಗಳು ರಸ್ತೆಯಲ್ಲಿ ನಿಲ್ಲಲು ಪ್ರಾರಂಭವಾಗಿದೆ. ಅವರಿಗೆ ಅಲ್ಲಿ ನಿಲ್ಲಲು ಸೂಚನೆ ಸಲಹೆ ನೀಡುವುದಾದರೆ ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆ ಇರುವುದು ಯಾಕಾಗಿ? ರಿಕ್ಷಾದವರಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದು, ಇನ್ನಷ್ಟು ಬೇಕಾದರೆ ಪರ್ಯಾಯ ಮಾಡಲಾಗುವುದು. ಅದು ಬಿಟ್ಟು ರಸ್ತೆಯಲ್ಲಿ ನಿಲ್ಲುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಪಟ್ಟಣ ಪಂಚಾಯಿತಿ ತೀರ್ಮಾನವನ್ನು ಶಾಸಕರಿಗೆ ತಿಳಿಸಿ, ಬಡವರಿಗೆ ಸಮಸ್ಯೆಯಾಗಿಲ್ಲ ಎಂಬುದನ್ನು ಮನವರಿಕೆ ಮಾಡಿದರೆ ಸರಿಯಾಗುತ್ತದೆ ಎಂದು ಸದಸ್ಯರು ತಿಳಿಸಿದರು.
ಕಾಲೇಜು ಕಟ್ಟಡಕ್ಕೆ ಆಕ್ಷೇಪ ಹಾಕಿದ ಬಗ್ಗೆ ಸರಿಯಾದ ಕ್ರಮ ಆಗಿಲ್ಲ. ಸ್ಮಶಾನ, ತ್ಯಾಜ್ಯ ಘಟಕದ ಸಮೀಪ ಕಾಲೇಜು ಆಗಬಾರದು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರೂ ಅಗತ್ಯ ಕ್ರಮ ಆಗಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆಯಬೇಕು ಎಂದು ಹೇಳಿದ್ದರೂ ಇದುವರೆಗೆ ವ್ಯವಸ್ಥೆಯಾಗಿಲ್ಲ. ಮುಂದೆ ಇದು ಪಂಚಾಯಿತಿಯ ಎಲ್ಲ ವ್ಯವಸ್ಥೆಗೆ ಸಮಸ್ಯೆಯಾಗಲಿದೆ. ಕಾನೂನು ಸಲಹೆಗಾರರ ಸಲಹೆ ಪಡೆದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಮುಖ್ಯಾಧಿಕಾರಿ ಕರುಣಾಕರ ವಿ., ಸಮುದಾಯ ಸಂಘಟನಾಽಕಾರಿ ಶ್ರೀಶೈಲ ಸಂಕನ ಗೌಡ, ಇಂಜಿನಿಯರ್ ಡೊಮಿನಿಕ್ ಡಿಮೊಲ್ಲೊ, ಸದಸ್ಯರು ಉಪಸ್ಥಿತರಿದ್ದರು.
ಜನರ ಮನೆಗೆ ತಲುಪಬೇಕು!
ಬಿ ಖಾತಾ ಬಗ್ಗೆ ಜನರು ಇನ್ನೂ ಜಾಗೃತಿಯಾಗಿಲ್ಲ. ದಾಖಲೆ ಸರಿಯಲ್ಲದ ಜಾಗದವರು ಬಿ ಖಾತೆ ಮಾಡಿಸಿಕೊಳ್ಳಬಹುದು. ಆ.೧೦ರ ಒಳಗೆ ಅರ್ಜಿಯೊಂದಿಗೆ ದಾಖಲೆಗಳನ್ನು ಸಲ್ಲಿಸಬಹುದು. ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದಕ್ಕಾಗಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಕ್ಕೂ ಕ್ರಮ ವಹಿಸಲಾಗಿದೆ. ಸದಸ್ಯರು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕಮ್ಯುನಿಟಿ ಮೊಬೈಲೈಸರ್ ನೇಮಕ ಆಗಿದ್ದು, ಸ್ವಚ್ಛತೆ ಸೇರಿ ವಿವಿಧ ಕಾರ್ಯಕ್ರಮಗಳ ಮಾಹಿತಿಯನ್ನು ಮನೆ ಮನೆಗೆ ತಲುಪಿಸಲಿದ್ದಾರೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಬಹುಗ್ರಾಮ ಡಿಪಿಆರ್ ಬೇಕು!
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಪಟ್ಟಣದ ಒಳಗೆ ಮನೆ ಮನೆಗೆ ನೀರು ಸರಬರಾಜು ಮಾಡುವುದಕ್ಕೆ ಪ್ರತ್ಯೇಕ ಡಿಪಿಆರ್ ಸಿದ್ಧಪಡಿಸಲು ಹೆಚ್ಚುವರಿಯಾಗಿ ಹಣ ಕಟ್ಟುವುದಕ್ಕೆ ಸೂಚನೆ ನೀಡಿದ್ದಾರೆ ಎಂದು ಮುಖ್ಯಾಽಕಾರಿಗಳು ತಿಳಿಸಿದಾಗ, ಡಿಪಿಆರ್ ಮೊದಲು ಸಂಬಂಧಪಟ್ಟ ಅಽಕಾರಿಗಳನ್ನು ಕರೆಸಿ ಸಭೆ ನಡೆಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪ್ರಸರಣ ಮಾರ್ಗಕ್ಕೆ ತೀವ್ರ ವಿರೋಧ
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸರಣ ವಿದ್ಯುತ್ ಮಾರ್ಗ ನಿರ್ಮಾಣ ಮಾಡದಂತೆ ಈ ಹಿಂದೆಯೇ ತೀರ್ಮಾನಿಸಲಾಗಿದೆ. ರೈತರದ್ದು ಈಗಾಗಲೇ ತೀವ್ರ ವಿರೋಧವಿದ್ದು, ಕಟ್ಟಡ ನಿರ್ಮಾಣಕ್ಕೆ ತಡೆ ನೀಡುವುದು ಸರಿಯಲ್ಲ. ಖಾಸಗಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಬಾರದು ಎನ್ನುವುದಕ್ಕೆ ಆಗುವುದಿಲ್ಲ. ಖಾಸಗಿ ಕಂಪನಿ ಸೂಚಿಸಿದ ಸರ್ವೇ ನಂಬರ್‌ನಲ್ಲೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಪಟ್ಟಣ ಪಂಚಾಯಿತಿಯ ವರ್ಗ ಜಾಗದಲ್ಲಿ ಕಟ್ಟಡ ಕಟ್ಟಲು ಅವಕಾಶ ನಿರಾಕರಣೆ ಮಾಡುವಂತಿಲ್ಲ. ಖಾಸಗಿ ಕಂಪನಿ ಆಕ್ಷೇಪ ನೀಡಿದಾಕ್ಷಣ ಅದನ್ನು ಒಪ್ಪಬೇಕಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕಂಪನಿ ಪತ್ರ ಪುರಸ್ಕರಿಸುವುದಕ್ಕೆ ಎಲ್ಲ ಸದಸ್ಯರ ವಿರೋಧ ವ್ಯಕ್ತವಾಯಿತು.
ಅನಕ್ಷರಸ್ಥರನ್ನು ಸಾಕ್ಷರರಾಗಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು, ಊರಿನಲ್ಲಿ ಹೆಬ್ಬೆಟ್ಟು ಬಳಸುವವರಿದ್ದರೆ ಇದರ ಪ್ರಯೋಜನ ಬಳಸಬಹುದು. ಪಳಿಕೆಯಲ್ಲಿ ಕಾಲೇಜು ಕಟ್ಟಡದಲ್ಲಿ ಪರವಾನಗಿ ಇಲ್ಲದೆ ಮಹಡಿ ನಿರ್ಮಾಣದ ವಿಚಾರದಲ್ಲಿ ನೋಟಿಸ್ ನೀಡಲಾಗಿದೆ. ಹಂತ ಹಂತವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
| ಕರುಣಾಕರ ವಿ., ಮುಖ್ಯಾಧಿಕಾರಿ,
ವಿಟ್ಲ ಪಟ್ಟಣ ಪಂಚಾಯಿತಿ
ಸಂಚಾರ ವ್ಯವಸ್ಥೆ ನಿಯಂತ್ರಣ ಮಾಡುವ ಪ್ರಯತ್ನ ಯಶಸ್ವಿಯಾಗಿದ್ದು, ಅದನ್ನು ಮುಂದೆಯೂ ಪಾಲಿಸಬೇಕು. ಶಾಸಕರು ಹೇಳಿದರೂ ರಸ್ತೆಯಲ್ಲಿ ನಾಲ್ಕು ರಿಕ್ಷಾಕ್ಕೆ ಅವಕಾಶವಿಲ್ಲ. ಪುಟ್‌ಪಾತ್‌ನಲ್ಲಿ ಇಡುವ ಫಲಕ, ವಾಹನ ತೆರವಿಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
| ಕರುಣಾಕರ ನಾಯ್ತೊಟ್ಟು, ಅಧ್ಯಕ್ಷರು,
ವಿಟ್ಲ ಪಟ್ಟಣ ಪಂಚಾಯಿತಿ