

ಹೊಳೆನರಸೀಪುರ : ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಕಿರುಕುಳ ತಡೆಯುವ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಬದ್ಧತೆಯಿಂದ ಹೋರಾಡಬೇಕು ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಪಾವಗಡ ನವೀನ್ ಹೇಳಿದರು.
ಪಟ್ಟಣದ ಟಾಪರ್ಸ್ ಪಿಯು ಕಾಲೇಜಿನಲ್ಲಿ ನಗರ ಪೊಲೀಸ್ ಠಾಣೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಪೋಕ್ಸೋ ಕಾಯ್ದೆ ಅರಿವು ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 18 ವರ್ಷ ಒಳಗಿನವರನ್ನು ಮಕ್ಕಳು ಎಂದೇ ಪರಿಗಣಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಶೋಷಣೆ ಹೆಚ್ಚುತ್ತಿದೆ. ವಯೋ ಸಹಜ ಆಕರ್ಷಣೆ ಮತ್ತು ಮೊಬೈಲ್ ಫೋನ್‌ಗಳಲ್ಲಿ ಜಾಲತಾಣಗಳ ಸಂಕರ್ಪ ಮಕ್ಕಳನ್ನು ಹಾದಿ ತಪ್ಪಿಸುತ್ತಿದೆ. ಮಕ್ಕಳಲ್ಲಿ ಸಕಾರಾತ್ಮಕ ಲೋಚನೆ ಬೆಳೆಸಿ, ಉತ್ತಮ ಪ್ರಜೆಗಳನ್ನಾಗಿ ಅವರನ್ನು ರೂಪಿಸುವಲ್ಲಿ ಅರಿವು ಮತ್ತು ಜಾಗೃತಿ ಅಗತ್ಯ ಎಂದರು.
ಮಕ್ಕಳಿಗೆ ಉತ್ತಮ ವಿಚಾರ ಮತ್ತು ಜೀವನದ ಗುರಿಗಳ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನ ಮತ್ತು ಪಾಲನೆ ಮಾಡುವುದು ಶಿಕ್ಷಕರ ಮತ್ತು ಹೆತ್ತವರ ಜವಾಬ್ದಾರಿ ಎಂದು ಅವರು ಸಲಹೆ ನೀಡಿದರು. ತುರ್ತು ಸಹಾಯ ಹಾಗೂ ಮಾಹಿತಿಗಾಗಿ 1098 ಮತ್ತು ಮಕ್ಕಳ ಸಹಾಯವಾಣಿ 112ಕ್ಕೆ ದೂರವಾಣಿ ಕರೆ ಮಾಡಬಹುದು. ಮಕ್ಕಳ ಶೋಷಣೆ ತಡೆಗೆ ಬಿಗಿ ಕಾನೂನು ಇದೆ ಎಂದರು. ನಗರ ಪೊಲೀಸ್ ಠಾಣೆ ಪಿಎಸ್ಸೈ ಅರುಣ್, ಟಾಪರ್ಸ್ ಕಾಲೇಜಿನ ಅಧ್ಯಕ್ಷ ಹರೀಶ, ಪ್ರಾಂಶುಪಾಲ ಸಂತೋಷ್ ಇತರರು ಇದ್ದರು.