ಪೌರತ್ವ ಕಾಯ್ದೆಯಿಂದ ತೊಂದೆಯಾಗಲ್ಲ, ಕಾಯ್ದೆ ಬೆಂಬಲಿಸಿ ಜನಜಾಗೃತಿ, ಸ್ವಾಹಿತಕ್ಕೆ ಸುಳ್ಳು ಸುದ್ದಿ ಹರಡುವುದಕ್ಕೆ ಬೇಸರ

6 DBP 4 Ryali
Published on

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಜನಜಾಗೃತಿ ಅಂಗವಾಗಿ ನಾಗರಿಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸೋಮವಾರ ನಗರದ ನೆಲದಾಂಜನೆಯ ಸ್ವಾಮಿ ದೇವಾಲಯದಿಂದ ತಾಲೂಕು ಕಚೇರಿ ವೃತ್ತದವರೆಗೆ ಜನ ಜಾಗೃತಿ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು.

ರ‌್ಯಾಲಿಯಲ್ಲಿ ಸಾವಿರಾರು ಮಂದಿ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಭವತ್ ಧ್ವಜ ಹಿಡಿದು ಭಾಗವಹಿಸಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿದರು.

435 ಅಡಿ ಉದ್ದದ ನಾಡಧ್ವಜ ಹಾಗೂ ಮೋದಿ ಭಾವಚಿತ್ರ ಮೆರವಣಿಗೆ ರ‌್ಯಾಲಿಯ ವಿಶೇಷ ಆಕರ್ಷಣೆಯಾಗಿತ್ತು. ಅಹಿತರಕರ ಘಟನೆ ನಡೆಯದಂತೆ ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ರಾಘವ ಎಸ್. ಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತು.

ತಾಲೂಕು ಕಚೇರಿ ವೃತ್ತದ ಬಳಿ ಸೇರಿದ ರ‌್ಯಾಲಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದ್ರಿ, ಕೆಲ ರಾಜಕೀಯ ಪಕ್ಷಗಳು, ನಗರ ನಕ್ಸರು, ಸ್ವಯಂ ಪ್ರೇರಿತ ಬುದ್ಧಿಜೀವಿಗಳು ಸ್ವಾರ್ಥಕ್ಕೆ ಕುತಂತ್ರದಿಂದ ಪೌರತ್ವ ಕಾಯ್ದೆಯನ್ನು ಅಲ್ಪಸಂಖ್ಯಾತರಿಗೆ ತಪ್ಪಾಗಿ ಅರ್ಥೈಸುವ ಮೂಲಕಗಲಭೆ ಪ್ರಚೋಧಿಸುತ್ತಿದ್ದಾರೆ ಎಂದರು.

ಕಾಶ್ಮೀರದಲ್ಲಿ ನಡೆಯುತ್ತಿದ್ದ ಕಲ್ಲು ತೂರಟವಿಂದು ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ ಎಂದರೆ ಈ ಕಾಯ್ದೆ ಅವಶ್ಯಕತೆ ಎಷ್ಟಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ದೇಶವನ್ನು ಸದೃಢಗೊಳಿಸುವ ಕಾಯ್ದೆಯೇ ಹೊರತು, ಭಾರತೀಯ ಮುಸಲ್ಮಾನರನ್ನು ದೇಷದಿಂದ ಹೊರಹಾಕುವುದಲ್ಲ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಸೌಲತ್ತು ನೀಡದೆ ಮತ ನೀಡುವ ಯಂತ್ರಗಳನ್ನಾಗಿಸಿಕೊಂಡಿದ್ದು, ಆ ಪಕ್ಷದ ಕುತಂತ್ರವನ್ನು ಅಲ್ಪಸಂಖ್ಯಾತರು ಅರಿತುಕೊಳ್ಳಬೇಕು ಎಂದರು.

ಕೇಂದ್ರದ ಮೋದಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವುದು ದೇಶದ ಭದ್ರತೆಗಾಗಿ ಹಾಗೂ ಶೋಷಣೆಗೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ದೇಶದಲ್ಲಿ ನೆಲೆ ಕಲ್ಪಿಸಲು. ಇದರಿಂದ ದೇಶದಲ್ಲಿನ ಮುಸ್ಲಿಮರಿಗೆ ತೊಂದರೆಯಾಗುವುದಿಲ್ಲ ಎಂದರು

ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಮಾತನಾಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಎನ್.ನಾಗರಾಜ್, ಮಾಜಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಶಿವಶಂಕರ್, ರಾಮಕೃಷ್ಣಯ್ಯ, ಬಿಜೆಪಿ ನಗರ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದರೆಡ್ಡಿ, ರಾಜಘಟ್ಟ ಕಾಂತರಾಜ್, ನಿಕಟಪೂರ್ವ ಮಾಜಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲಾ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಗಿರಿಜಾ, ಜಿಲ್ಲಾ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣಕುಮಾರ್, ಜಿಪಂ ಮಾಜಿ ಅಧ್ಯಕ್ಷ ಟಿವಿ ಲಕ್ಷ್ಮೀನಾರಾಯಣ್, ಬಿಜೆಪಿ ಮಾಜಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net