

ಮೂಡುಬಿದಿರೆ: ಉಡುಪಿ, ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ಕಾಮಗಾರಿಗಾಗಿ ಖಾಸಗಿ ಕಂಪನಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಡ್ಡೋಡಿ ಗ್ರಾಮದ ಮಂಜನಬೈಲು ಪ್ರದೇಶದ ಖಾಸಗಿ ಜಾಗದಲ್ಲಿ ಶನಿವಾರ ಸರ್ವೇ ನಡೆಸಲು ಬಂದಾಗ ಸ್ಥಳೀಯ ಭೂಮಾಲೀಕರು ಹಾಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದರು.
ನೂರಾರು ಸಂಖ್ಯೆಯ ಪೊಲೀಸ್ ರಕ್ಷಣಾ ಪಡೆಯೊಂದಿಗೆ ಸ್ಥಳಕ್ಕೆ ಬಂದು ಖಾಸಗಿ ಜಮೀನುಗಳಿಗೆ ನುಗ್ಗಿ ಸರ್ವೇ ನಡೆಸುವ ಮೂಲಕ ಬೆದರಿಕೆಯ ತಂತ್ರ ಅನುಸರಿಸಲಾಗಿದೆ. ಭೂಮಿಯ ಮಾಲೀಕರ ಒಪ್ಪಿಗೆ ಪಡೆಯದೆ ಸರ್ವೇ ನಡೆಸಲು ಆದೇಶ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನಡೆಯನ್ನು ಸ್ಥಳೀಯರು ಖಂಡಿಸಿದರು. ಈ ಧೋರಣೆ ಮುಂದುವರಿಸಿದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಭೂಮಿಯ ಮಾಲೀಕರು ಹಾಗೂ ರೈತರು ಎಚ್ಚರಿಸಿದ್ದಾರೆ.