'ಬಿಜೆಪಿ ತಪ್ಪಿನಿಂದ ಕಾಂಗ್ರೆಸ್‌ಗೆ ಅಧಿಕಾರ'

'Power to Congress due to BJP's mistake'
Published on

ಮಡಿಕೇರಿ:

ನಮ್ಮದೇ ಆದ ತಪ್ಪಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಬುಧವಾರ ಮಡಿಕೇರಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ಸಮಯ ಆದರೂ ಯಾವುದೇ ಒಂದು ವಿಧಾನಸಭಾ ಕ್ಷೇತ್ರಕ್ಕೆ ಈತನಕ ಒಂದು ರೂಪಾಯಿ ಕೂಡ ಅನುದಾನ ಬಂದಿಲ್ಲ. ರಾಜ್ಯದಲ್ಲಿ ಒಂದು ಕಡೆ ಭೀಕರ ಬರಗಾಲ ಇದ್ದರೂ ರಾಜ್ಯ ಖಜಾನೆಯಿಂದ ರೈತರಿಗೆ ನೆರವು ಕೊಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ.

ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಚುನಾವಣೆಯಲ್ಲಿ ಟಿಕೆಟ್ ತಪ್ಪಿದೆ ಅಂದುಕೊಳ್ಳುವುದಕ್ಕಿಂತ ರಾಜ್ಯ ರಾಜಕಾರಣದಲ್ಲಿ ಅವರಿಗೆ ಉಜ್ವಲ ಭವಿಷ್ಯ ಇದೆ ಎನ್ನಬಹುದು. ನಾನು ಅವರ ಜತೆ ನಿಂತುಕೊಂಡು ಅವರ ಭವಿಷ್ಯ ರೂಪಿಸಲು ಸಹಕಾರ ನೀಡುತ್ತೇನೆ. ನಾನು ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ೨ ಸಂಕಲ್ಪ ಮಾಡಿದ್ದು, ಜೆಡಿಎಸ್ ಬೆಂಬಲದೊಂದಿಗೆ ರಾಜ್ಯದ ೨೮ ಕ್ಷೇತ್ರಗಳಲ್ಕೂ ಗೆಲ್ಲಬೇಕು ಎನ್ನುವುದು ಒಂದು ಸಂಕಲ್ಪವಾದರೆ. ರಾಜ್ಯದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎನ್ನುವುದು ಇನ್ನೊಂದು ಸಂಕಲ್ಪವಾಗಿದೆ.

ರಾಜ್ಯದ ಎಲ್ಲಾ ೨೮ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದು, ಎಲ್ಲಾ ಕಡೆಯಲ್ಲೂ ವಾತಾವರಣ ಬಿಜೆಪಿ ಪರ ಕಂಡುಬರುತ್ತಿದೆ. ಎಲ್ಲಾ ಭಾಗಗಳಲ್ಲೂ ಜಾತ್ಯತೀತ ಬೆಂಬಲ ಸಿಗುತ್ತಿದೆ ಕಾಂಗ್ರೆಸ್‌ನಲ್ಲಿ ನಾಯಕರ ಕೊರತೆ ಇದೆ. ಹಾಗಾಗಿ ಆಪರೇಷನ್‌ನಂತಹ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಯಾವ ಕೆಲಸಗಳೂ ಬಿಜೆಪಿ ಮೇಲೆ ಪರಿಣಾಮ ಬೀರುವುದಿಲ್ಲ. ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಂಎಲ್‌ಸಿ ತೇಜಸ್ವಿನಿ ಗೌಡ ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದಾಗ, ’ತೇಜಸ್ವಿನಿ ಗೌಡ ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದಷ್ಟೇ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net