ಮೈಷುಗರ್‌ಗೆ ವಿದ್ಯುತ್ ಪೂರೈಕೆಗೆ ಮನವಿ: ಇಂಧನ ಸಚಿವರಿಗೆ ಎಂಎಲ್‌ಸಿ ದಿನೇಶ್ ಗೂಳಿಗೌಡ ಮನವಿ

1 (3)
Published on

ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯಲು ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಮನವಿ ಸಲ್ಲಿಸಿರುವ ಅವರು, ಮೈಷುಗರ್ ಕಾರ್ಖಾನೆ ಮಂಡ್ಯ ಭಾಗದ ರೈತರ ಜೀವನಾಡಿ. ಇಲ್ಲಾಗುವ ಕಬ್ಬಿನ ಕಟಾವನ್ನು ನಂಬಿಕೊಂಡು ಲಕ್ಷಾಂತರ ರೈತ ಕುಟುಂಬಗಳು ಇವೆ. ಅಲ್ಲದೆ, ಈ ಬಾರಿ ಸುಮಾರು 5 ಲಕ್ಷ ಟನ್ ಕಬ್ಬನ್ನು ನುರಿಸುವ ಗುರಿಯನ್ನು ಹಾಕಿಕೊಂಡಿದೆ. ಈಗ ಎದುರಾಗಿರುವ ಸಮಸ್ಯೆಯೆಂದರೆ ಈ ಹಿಂದಿನಿಂದಲೂ ನಷ್ಟದಲ್ಲಿದ್ದ ಕಂಪನಿಗೆ ವಿದ್ಯುತ್ ಬಿಲ್ ಅನ್ನು ಕಟ್ಟಲು ಸಾಧ್ಯವಾಗಿಲ್ಲ. 40.86 ಕೋಟಿ ರೂಪಾಯಿಗಳ ವಿದ್ಯುತ್ ಬಾಕಿ ಮೊತ್ತವಿದ್ದು, ಇದನ್ನು ಹಂತ ಹಂತವಾಗಿ ಪಾವತಿ ಮಾಡಲು ಹಾಗೂ ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸಲು ಅಗತ್ಯ ವಿದ್ಯುತ್ ಸರಬರಾಜು ಮಾಡಲು ಸೆಸ್ಕ್‌ನವರಿಗೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

ಮೈಷುಗರ್ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 5 ಲಕ್ಷ ಟನ್ ಕಬ್ಬನ್ನು ಈ ಕಾರ್ಖಾನೆಗೆ ಸರಬರಾಜು ಮಾಡಲು ರೈತರು ಒಪ್ಪಂದ ಮಾಡಿಕೊಂಡಿರುತ್ತಾರೆ. ಪ್ರಸ್ತುತ ಸದರಿ ಕಂಪನಿಯವರು ಸೆಸ್ಕ್‌ಗೆ ಸುಮಾರು 40.86 ಕೋಟಿ ರೂ ವಿದ್ಯುತ್ ಬಾಕಿ ಮೊತ್ತವನ್ನು ಪಾವತಿಸಬೇಕಾಗಿರುತ್ತದೆ. ಆದರೆ, ಕಂಪನಿಯ ಆರ್ಥಿಕ ಪರಿಸ್ಥಿತಿಯು ಇನ್ನು ಸುಧಾರಿಸದಿರುವುದರಿಂದ ಬಾಕಿ ಮೊತ್ತವನ್ನು ಪಾವತಿಸಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಪ್ರಸಕ್ತ ಹಂಗಾಮಿನಲ್ಲಿ ಕಬ್ಬನ್ನು ನುರಿಯಲು ವಿದ್ಯುತ್ ಅವಶ್ಯಕತೆಯಿರುವುದರಿಂದ ಯಾವುದೇ ತೊಂದರೆಯಾಗದಂತೆ ಸರಬರಾಜು ಮಾಡಲು ಸೂಚಿಸಬೇಕು. ಈ ಭಾಗದಲ್ಲಿ ಕಬ್ಬು ಪ್ರಮುಖ ಬೆಳೆಯಲ್ಲೊಂದಾಗಿದೆ. ಈ ಹಂತದಲ್ಲಿ ಕಬ್ಬು ನುರಿಸಲು ತೊಂದರೆಯಾದರೆ ಅದು ರೈತರ ಮೇಲೆ ಬಹಳವೇ ಪರಿಣಾಮವನ್ನು ಬೀರುತ್ತದೆ. ರೈತರ ಹಿತದೃಷ್ಟಿಯಿಂದ ತಾವು ಮಧ್ಯ ಪ್ರವೇಶ ಮಾಡಿ ಕಬ್ಬು ನುರಿಸಲು ವಿದ್ಯುತ್ ಸಮಸ್ಯೆ ಆಗದಂತೆ ಆದೇಶಿಸಲು ಕೋರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ಅಧಿಕಾರಿಗಳ ಜತೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net