ವಿದ್ಯುತ್ ಕಡಿತದಿಂದ ಹಲವೆಡೆ ಕಗ್ಗತ್ತಲು

Nandagudi-22-1 Manchapanalli
Published on

 ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ಪ್ರಸಕ್ತ ಸಾಲಿನ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಗ್ರಾಮಾಂತರ ಜಿಲ್ಲೆಯ ಹಲವು ಕಡೆಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡು ದಿನಗಟ್ಟಲೆ ವಿದ್ಯುತ್ ಇಲ್ಲದೆ ಪರದಾಡಿದ ಸನ್ನಿವೇಶಗಳು ಕಂಡುಬಂದಿವೆ.

ಗ್ರಾಮಾಂತರ ಜಿಲ್ಲೆಯ ವಿವಿಧೆಡೆ 56 ವಿದ್ಯುತ್ ಕಂಬಗಳು ಧರೆಗುರುಳಿದರೆ, 19 ವಿದ್ಯುತ್ ಪರಿವರ್ತಕಗಳಿಗೆ ತೀವ್ರ ಹಾನಿಯಾಗಿದೆ, ಸುಮಾರು 28 ಲಕ್ಷ ರೂಪಾಯಿ ಆರ್ಥಿಕ ನಷ್ಟ ಎದುರಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ. ಪ್ರಸ್ತುತ ಧರೆಗುರುಳಿದ ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದೆ ಹಾಗೂ ಹಾನಿಗೊಳಗಾಗಿದ್ದ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಗೊಳಿಸಲಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

ಭಾಗಶಃ ಮರ ಹಾಗೂ ಮರದ ಕೊಂಬೆಗಳು ವಿದ್ಯುತ್ ಕಂಬ ಹಾಗೂ ವಿದ್ಯುತ್ ಪರಿವರ್ತಕಗಳ ಮೇಲೆ ಉರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಪರದಾಡಿದ ಪ್ರಸಂಗಗಳು ಸಾಕಷ್ಟು ನಡೆದಿವೆ. ಕೆಲವು ಗ್ರಾಮಗಳಲ್ಲಿ ಎರಡ್ಮೂರು ದಿನ ಕರೆಂಟ್ ಇಲ್ಲದೆ ಇಡೀ ಗ್ರಾಮಗಳು ಕಗ್ಗತ್ತಲಿನಲ್ಲಿ ಕಳೆಯುವಂತಾಗಿದೆಯಲ್ಲದೆ ಕುಡಿಯುವ ನೀರಿಗೂ ಪರದಾಡಿದ ಸಂದರ್ಭಗಳು ಎದುರಾಗಿದೆ.

ರಿಪೇರಿಗೆ ವಿಳಂಭ: ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಳಿಗೆ ಹಾನಿಯಾದ ವಿದ್ಯುತ್ ಕಂಬಗಳ ದುರಸ್ತಿಗೆ ವಿಳಂಭ ನೀತಿ ಅನುಸರಿಸುವುದರಿಂದ ವಿದ್ಯುತ್ ಸಂಪರ್ಕವಿಲ್ಲದೆ ಗ್ರಾಮೀಣ ಜನರು ಪರದಾಡುವಂತಾಗಿದೆ, ಬೆಸ್ಕಾಂ ಕಚೇರಿಗೆ ಹಲವು ಬಾರಿ ಎಡತಾಕಿದರೂ ಅಧಿಕಾರಿ ಸಿಬ್ಬಂದಿಯಿಂದ ಸಮರ್ಪಕ ಸ್ಪಂದನೆ ಸಿಗುವುದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇನ್ನು ಪೋನ್ ಕರೆಯಂತು ಸ್ವೀಕರಿಸುವುದೇ ಇಲ್ಲ, ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿದರೆ ದುರಸ್ತಿ ಮಾಡುತ್ತಾರೆ ಬರುತ್ತಾರೆ ಎಂಬ ಸಿದ್ದ ಉತ್ತರವಷ್ಟೇ ಬರುತ್ತದೆ ಆದರೆ ಕೆಲಸ ಚುರುಕುಗೊಳ್ಳುವುದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಇದರಿಂದ ನಗರ ಪ್ರದೇಶಗಳೂ ಹೊರತಾಗಿಲ್ಲ, ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಹೊಸಕೋಟೆಯಲ್ಲಿ ವಿದ್ಯುತ್ ಕಡಿತದಂಥ ಪ್ರಕರಗಳು ಹೆಚ್ಚಿವೆ, ಇಲ್ಲಿನ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಲವು ಬಾರಿ ಆಕ್ರೋಶ ಹೊರಹಾಕಿದ್ದಾರೆ.

ಕೊಂಬೆಗಳನ್ನು ಕತ್ತರಿಸಲ್ಲ: ವಿದ್ಯುತ್ ಕಂಬ ಹಾಗೂ ವಿದ್ಯುತ್ ಪರಿವರ್ತಕಗಳಿಗೆ ತಾಗುವಂತಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವುದಿಲ್ಲ, ಸಣ್ಣ ಮಳೆಗಾಳಿಗೂ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಆಗಿ ವಿದ್ಯುತ್ ಕಡಿತಗೊಳ್ಳುತ್ತದೆ, ಇನ್ನು ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳಿಗೆ ತಾಗುವಂತೆಯೇ ಶಿಥಿಲಗೊಂಡಿರುವ ಮರಗಳು ಇವೆ, ಇವುಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಹಾಗೂ ಬೆಸ್ಕಾಂ ಸಿಬ್ಬಂದಿಗೆ ಹಲವು ಬಾರಿ ದೂರು ನೀಡಿದರೂ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಾರೆ ಅವಘಡಗಳು ಸಂಭವಿಸಿದ ಬಳಿಕ ಬರುತ್ತಾರೆ ಇದರಿಂದ ಸಾಕಷ್ಟು ತೊಂದರೆ ಎದುರಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ನಂದಗುಡಿ ಹೋಬಳಿ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಪ್ಪನಹಳ್ಳಿ ಗ್ರಾಮದಲ್ಲಿ ಮಳೆಗಾಳಿಗೆ ಮುರಿದುಬಿದ್ದ ವಿದ್ಯುತ್ ಕಂಬ ದುರಸ್ತಿಪಡಿಸಲು ಬರೊಬ್ಬರಿ ಮೂರು ದಿನ ತೆಗೆದುಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಕಾಲ ಕಳೆಯುವ ಜತೆಗೆ ಕುಡಿವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸಣ್ಣ ಮಳೆಯಾದರೂ ಇಂಥ ಪರಿಸ್ಥಿತಿ ಪುನಾವರ್ತನೆಯಾಗುತ್ತದೆ ಬೆಸ್ಕಾಂ ಅಧಿಕಾರಿಗಳು ಇಂಥ ಸನ್ನಿವೇಶದಲ್ಲಿ ತುರ್ತಾಗಿ ಸ್ಪಂದಿಸಬೇಕು ಎಂಬುದು ಗ್ರಾಮಸ್ಥರ ಮನವಿಯಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಮಳೆಗಾಳಿ ಕಾರಣಕ್ಕೆ ವಿದ್ಯುತ್ ಕಂಬ ಅಥವಾ ವಿದ್ಯುತ್ ಪರಿವರ್ತಕ ಹಾನಿಯಾದರೆ ಕೆಲವೇ ತಾಸುಗಳಲ್ಲಿ ಅದನ್ನು ದುರಸ್ತಿಪಡಿಸಲಾಗುತ್ತಿದೆ, ಇದಕ್ಕೆ ಬೇಕಾದ ಪರಿಕರಗಳು ದಾಸ್ತಾನು ಇದೆ ಹಾಗೆಯೇ ಸಿಬ್ಬಂದಿಯೂ ಸಾಕಷ್ಟಿದ್ದಾರೆ. ಆದ್ದರಿಂದ ದುರಸ್ತಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಆದರೆ ಕೆಲವು ಸಬ್‌ಸ್ಟೇಷನ್ ಕಡೆಗಳಲ್ಲಿ ಮೇಜರ್ ಅವಘಡಗಳಾದ ಸಂದರ್ಭದಲ್ಲಿ ಅರ್ಧ ದಿನದಷ್ಟು ಸಮಯ ಬೇಕಾಗಬಹುದು, ಅದರ ಹೊರತಾಗಿ ತುರ್ತಾಗಿ ದುರಸ್ತಿ ಕೆಲಸಕ್ಕೆ ಬೆಸ್ಕಾಂ ಸಿದ್ದವಿದೆ.

ಡಾ.ಎನ್.ಶಿವಶಂಕರ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

ಮಳೆಗಾಳಿ ಇಲ್ಲದಿದ್ದರೂ ಸುಖಾಸುಮ್ಮನೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ, ಬೇಸಿಗೆಯಲ್ಲಿ ಈ ಪ್ರಮಾಣ ಹೆಚ್ಚು ಇದರಿಂದ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ ಇನ್ನು ವಿದ್ಯುತ್ ಕಂಬಕ್ಕೆ ಹಾನಿಯಾದರೆ ಮುಗಿಯಿತು ಕರೆಂಟ್ ಬರುವುದೋ ಇಲ್ಲವೋ ಎಂಬಂಥ ಸ್ಥಿತಿ ನಿರ್ಮಾಣವಾಗುತ್ತದೆ, ಮಳೆಗಾಳಿ ಅಥವಾ ಇನ್ಯಾವುದೋ ಕಾರಣಕ್ಕೆ ವಿದ್ಯುತ್ ಕಡಿತಗೊಳ್ಳುವುದು ಸಹಜ ಆದರೆ ತುರ್ತಾಗಿ ಇದಕ್ಕೆ ಸ್ಪಂದಿಸಬೇಕು ಎಂಬುದು ನಮ್ಮ ಮನವಿ.

ವಿಜಯ್‌ಕುಮಾರ್, ಹೊಸಕೋಟೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net