ಹೆಬ್ಬುಳದಲ್ಲಿ ವಿದ್ಯುತ್ ಅವಘಡ

ANK current
Published on

ಅಂಕೋಲಾ: ವಿದ್ಯುತ್ ತಂತಿ ತುಂಡಾದ ಪರಿಣಾಮ 30ಕ್ಕೂ ಹೆಚ್ಚು ಮನೆಗಳಿಗೆ ಮತ್ತು ಪಂಪ್​ಹೌಸ್​ಗೆ ವಿದ್ಯುತ್ ಪ್ರವಹಿಸಿ ಗೃಹೋಪಯೋಗಿ ವಸ್ತುಗಳು ಹಾಗೂ ವಿದ್ಯುತ್ ಪರಿಕರಗಳು ಸುಟ್ಟು ಲಕ್ಷಾಂತರ ರೂ. ಹಾನಿಯಾದ ಘಟನೆ ತಾಲೂಕಿನ ಸುಂಕಸಾಳ ಗ್ರಾಪಂ ವ್ಯಾಪ್ತಿಯ ಹೆಬ್ಬುಳ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ಸ್ಥಳಕ್ಕೆ ಹೆಸ್ಕಾಂ ಎಇಇ ಪ್ರವೀಣ ನಾಯ್ಕ ಭೇಟಿ ನೀಡಿ ಸ್ಥಳೀಯ ಲೈನ್​ವೆುನ್ ಮಹೇಶ ಅವರಿಂದ ಮಾಹಿತಿ ಪಡೆದರು. ಆಕಸ್ಮಿಕವಾಗಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮನೆ ಮತ್ತು ಪಂಪ್​ಹೌಸ್​ಗೆ ಅಳವಡಿಸಿದ ಮೀಟರ್ ಬೋರ್ಡ್, ಪಂಪ್​ಸೆಟ್ ಹಾಗೂ ಗೃಹೋಪಯೋಗಿ ವಸ್ತುಗಳು ಸುಟ್ಟಿವೆ. ಹಾನಿಯಾದ ಬಗ್ಗೆ ಶಿರಸಿಯ ವಿದ್ಯುತ್ ಪರಿವೀಕ್ಷಕರು, ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದರು. ಶಾಖಾಧಿಕಾರಿ ಸಂತೋಷ ನಾಯ್ಕ ಉಪಸ್ಥಿತರಿದ್ದರು.

ವಿದ್ಯುತ್ ಅವಘಡದಿಂದಾದ ಸಮಸ್ಯೆಗಳ ಕುರಿತು ಗ್ರಾಪಂ ಸದಸ್ಯ ಪ್ರವೀಣ ನಾಯರ ಮತ್ತು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.

ವಿದ್ಯುತ್ ಅವಘಡದಿಂದ ಹಾನಿಗೊಳಗಾದ ಹೆಬ್ಬುಳ ವ್ಯಾಪ್ತಿಯ ಬಡ ಕುಟುಂಬಗಳಿಗೆ ಶೀಘ್ರವೇ ಮರು ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆ ಹಾನಿಯ ಕುರಿತು ಕಂದಾಯ ಹಾಗೂ ಹೆಸ್ಕಾಂ ಇಲಾಖೆ ಜಂಟಿ ಸರ್ವೆ ನಡೆಸಿ ವರದಿ ಸಲ್ಲಿಸಿದ ನಂತರ ಸ್ಥಳೀಯರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಸತೀಶ ಸೈಲ್, ಶಾಸಕ

ಹೆಬ್ಬುಳ ಭಾಗದಲ್ಲಿ ಪದೇ ಪದೆ ವಿದ್ಯುತ್ ಅವಘಡ ಸಂಭವಿಸುತ್ತಿವೆ. ಗುರುವಾರ ಸಂಭವಿಸಿದ ಅವಘಡದಲ್ಲಿ 30ಕ್ಕೂ ಹೆಚ್ಚು ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳು ಸುಟ್ಟಿವೆ. ಸ್ಥಳೀಯರ ಆಸ್ತಿ-ಪಾಸ್ತಿ ಹಾಗೂ ಜೀವರಕ್ಷಣೆ ನಮ್ಮ ಹೊಣೆಯಾಗಿದೆ. ಸಂಬಂಧಿಸಿದವರು ತಕ್ಷಣವೇ ಸ್ಪಂದಿಸದಿದ್ದರೆ ಹೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಲಾಗುವುದು. ಪ್ರವೀಣ ನಾಯರ, ಸುಂಕಸಾಳ ಗ್ರಾಪಂ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net