ಕಗ್ಗತ್ತಲಿನಲ್ಲಿ ಕಾರನಾಳ ಗ್ರಾಮ

tubagere
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಗ್ರಾಮ ಪಂಚಾಯತಿ
Published on

ಬೀದಿ ದೀಪಗಳು ಉರಿಯಲ್ಲ

ಸಂಜೆ ಮೇಲೆ ಗ್ರಾಮಸ್ಥರು ಓಡಾಡುವಂತಿಲ್ಲ


ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾರನಾಳ ಗ್ರಾಮದ ಜನತೆಗೆ ಇಲ್ಲಿನ ಪಂಚಾಯಿತಿ ಕತ್ತಲೆಯ ಭಾಗ್ಯ ನೀಡಿದೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಆದರೆ ದೊಡ್ಡಬಳ್ಳಾಪುರ ತಾಲೂಕಿಗೆ ಸೇರಿರುವ ಈ ಹೋಬಳಿಯ ಗ್ರಾಮಗಳಲ್ಲಿ ಇಂಥ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ. ಪ್ರತಿ ಅಭಿವೃದ್ಧಿ ವಿಷಯದಲ್ಲಿಯೂ ಹೋಬಳಿಯ ಗ್ರಾಮಗಳು ಹಿಂದುಳಿಯುತ್ತಲೇ ಬಂದಿವೆ ಅದರಲ್ಲೂ ತೂಬಗೆರೆ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯದ ಲವಾಗಿ ಗ್ರಾಮಗಳಲ್ಲಿ ಮೂಲಸೌಕರ್ಯ ಸಮಸ್ಯೆಗಳು ತಾಂಡವಾಡುತ್ತಿವೆ ಇದಕ್ಕೆ ಪ್ರತ್ಯಕ್ಷ ನಿದರ್ಶನ ಎಂಬಂತೆ ಕಳೆದ ಆರೇಳು ತಿಂಗಳಿಂದ ಇಡೀ ಗ್ರಾಮದಲ್ಲಿ ಬೀದಿ ದೀಪಗಳು ಕಣ್ಣುಮುಚ್ಚಿವೆ.
ಸಂಜೆಯಾಗುತ್ತಲೇ ಸಂಚಾರ ನಿರ್ಬಂಧ:
ಗ್ರಾಮದಲ್ಲಿನ ಅಷ್ಟೂ ಬೀದಿದೀಪಗಳು ಹಾಳಾಗಿವೆ, ಸಂಜೆಯಾಗುತ್ತಲೆ ಗ್ರಾಮದಲ್ಲಿ ಜನರ ಸಂಚಾರವೇ ನಿರ್ಬಂಧವಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಲಗದ್ದೆಗಳ ಕಡೆಯಿಂದ ದನಕರುಗಳನ್ನು ಮನೆಗಳತ್ತ ಕರೆತರಲು ತಡಕಾಡುವಂತಾಗಿದೆ. ಹಿರಿಯ ನಾಗರೀಕರು ಮಕ್ಕಳು ಸಂಜೆ ಬಳಿಕ ಮನೆಯಿಂದ ಹೊರಗೆ ಕಾಲಿಡದಂತಾಗಿದೆ ಎಂದು ಗ್ರಾಮಸ್ಥರು ಆಳಲು ತೋಡಿಕೊಂಡಿದ್ದಾರೆ.
ಚಿರತೆ ಭೀತಿ:
ತೂಬಗೆರೆ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಸಾಮಾನ್ಯವಾಗಿದೆ, ಕಳೆದ ಆರೇಳು ತಿಂಗಳ ಅವಧಿಯಲ್ಲಿಯೇ ನಾಲ್ಕೈದು ಬಾರಿ ಗ್ರಾಮಗಳ ಸಹರದ್ದಿನ ಬಳಿ ಕುರಿಮೇಕೆಗಳ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ನಡೆದಿವೆ. ಮೊದಲೆ ಆತಂಕದಲ್ಲಿರುವ ಗ್ರಾಮಸ್ಥರಿಗೆ ಬೀದಿದೀಪಗಳಿಲ್ಲದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇನ್ನು ದೊಡ್ಡಬಳ್ಳಾಪುರ, ಬೆಂಗಳೂರಿಗೆ ಪ್ರತಿದಿನ ಉದ್ಯೋಗಕ್ಕೆ ಹೋಗಿಬರುವವರು ಇದ್ದಾರೆ. ಅವರೆಲ್ಲ ರಾತ್ರಿ ವೇಳೆ ಗ್ರಾಮಗಳಿಗೆ ಮರಳುತ್ತಾರೆ, ಬೀದಿ ದೀಪವಿಲ್ಲದೆ ಗ್ರಾಮ ಪ್ರವೇಶಿಸಲು ಹೆದರುವಂತಾಗಿದೆ. ದೊಡ್ಡಬಳ್ಳಾಪುರದಲ್ಲಿ ಇತ್ತೀಚಿಗೆ ಸರಗಳವು, ಮನೆಕಳ್ಳತನ, ದೇಗುಲಗಳಲ್ಲಿ ಕಾಣಿಕೆ ಹುಂಡಿಗಳ ಕಳವು ಪ್ರಕರಣಗಳು ಜಾಸ್ತಿಯಾಗಿವೆ. ಇಂಥ ಸನ್ನಿವೇಶದಲ್ಲಿ ಹೆದರಿರುವ ಗ್ರಾಮಸ್ಥರಿಗೆ ಬೀದಿ ದೀಪ ಇಲ್ಲದಿರುವುದು ಮತ್ತಷ್ಟು ಹೆದರಿಕೆಗೆ ಕಾರಣವಾಗಿದೆ.

ಸಂಜೆಯಾಗುತ್ತಲೇ ಗ್ರಾಮದಲ್ಲಿ ಕತ್ತಲು ಆವರಿಸುತ್ತದೆ ಬೀದಿ ದೀಪಗಳಿಲ್ಲದೆ ಗ್ರಾಮದಲ್ಲಿ ಸ್ಮಶಾನದ ವಾತಾವರಣ ಕಂಡುಬರುತ್ತದೆ. ಮಹಿಳೆಯರು ಮಕ್ಕಳು ಸಂಜೆ ಬಳಿಕ ಮನೆಯಿಂದ ಹೊರಗೆ ಕಾಲಿಡುವಂತೆಯೇ ಇಲ್ಲ. ಇದಕ್ಕೆಲ್ಲ ತೂಬಗೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ, ಆರು ತಿಂಗಳಿಂದ ವಿದ್ಯುತ್ ಕಂಬಗಳಲ್ಲಿ ಬೀದಿ ದೀಪಗಳು ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮಕೃಷ್ಣಪ್ಪ, ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net