

ವಿಜಯವಾಣಿ ಸುದ್ದಿಜಾಲ ವಿಜಯಪುರ
ಪಟ್ಟಣದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿನ ಎವರ್ ಗ್ರೀನ್ ಶಾಲೆಯ ರಸ್ತೆ ಸೇರಿ ಪಟ್ಟಣದ ಹಲವು ಭಾಗಗಳಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಸಡಿಲಗೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆತಂಕ ಎದುರಾಗಿದೆ.
ಕಳೆದ ಕೆಲ ದಿನಗಳಿಂದ ಸುರಿದ ಗಾಳಿ, ಮಳೆಗೆ ಪಟ್ಟಣದ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ವಾಲಿವೆ. ಇದರಿಂದಾಗಿ ವಿದ್ಯುತ್ ತಂತಿಗಳು ಸಡಿಲಗೊಂಡು ಒಂದೊಕ್ಕೊಂದು ತಾಗುತ್ತಿವೆ. ಗಾಳಿ ಬೀಸಿದಾಗಲೆಲ್ಲ ತಂತಿಗಳು ಸಂಪರ್ಕಕ್ಕೆ ಬಂದು ವಿದ್ಯುತ್ ಕಿಡಿ ಹೊತ್ತಿಕೊಳ್ಳುತ್ತಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಆತಂಕಗೊಳ್ಳುತ್ತಿದ್ದಾರೆ.
ಬೀಳುವ ಹಂತದಲ್ಲಿ ಕಂಬಗಳು: ಪಟ್ಟಣದ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ. ಜೋರು ಮಳೆಗಾಳಿಗೆ ಧರಶಾಹಿಯಾಗುವ ಸಾಧ್ಯತೆ ಹೆಚ್ಚಿದೆ. ಕೆಲವು ಕಂಬಗಳಲ್ಲಿ ಸಿಮೆಂಟ್ ಕಿತ್ತುಬಂದು ಕಬ್ಬಿಣದ ಸರಳುಗಳು ಕಾಣುತ್ತಿವೆ. ಇವು ಯಾವಾಗ ಬೇಕಾದರೂ ಮುರಿದುಬೀಳುವ ಸ್ಥಿತಿಯಲ್ಲಿವೆ. ಆದ್ದರಿಂದ ಇಂಥ ಕಂಬಗಳನ್ನು ಪರಿಶೀಲಿಸಿ ತೆರವುಗೊಳಿಸಬೇಕು, ಬದಲಿ ಕಂಬಗಳನ್ನು ಹಾಕುವ ಮೂಲಕ ವಿದ್ಯುತ್ ಅಪಘಡಗಳಿಂದ ಪಾರು ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಕಟ್ಟಡಗಳಿಗೆ ತಾಗುವ ತಂತಿ ಇನ್ನು ಪಟ್ಟಣದ ಹಳೇಯ ಬಡಾವಣೆಗಳಲ್ಲಿ ಕಟ್ಟಡಗಳ ಸಮೀಪವೇ ಹಾದುಹೋಗಿರುವ ವಿದ್ಯುತ್ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕಟ್ಟಡದ ಮಹಡಿಯಿಂದ ಕೈಚಾಚಿದರೆ ಎಟುಕುವಂತಿವೆ. ಜೋರು ಗಾಳಿ ಬೀಸಿದರೆ ಈಗಾಗಲೇ ಸಡಿಲಗೊಂಡಿರುವ ವಿದ್ಯುತ್ ತಂತಿಗಳು ಕಟ್ಟಡಕ್ಕೆ ತಾಗುವಂತಿವೆ ಇದರಿಂದ ನಿವಾಸಿಗಳು ಆತಂಕದಲ್ಲಿ ದಿನದೂಡುವಂತಾಗಿದೆ. ಈ ಬಗ್ಗೆ ಬೆಸ್ಕಾಂ ಅವರು ಪರಿಶೀಲನೆ ನಡೆಸಬೇಕು. ತೂಗಾಡುತ್ತಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು ಒಂದಕ್ಕೊಂದು ತಾಗದಂತೆ ತೆಗೆದುಕೊಳ್ಳಬೇಕಾದ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಕರೆಂಟ್ ಕಣ್ಣಾಮುಚ್ಚಾಲೆ: ಕಳೆದೊಂದು ವಾರದಿಂದ ಪಟ್ಟಣದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ. ಸಣ್ಣ ಗಾಳಿ ಬೀಸಿದರೂ ವಿದ್ಯುತ್ ಕಡಿತಗೊಳ್ಳುತ್ತಿದೆ. ಮೂರ‌್ನಾಲ್ಕು ಗಂಟೆ ಕಳೆದರೂ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ನೇತಾಡುತ್ತಿರುವ ತಂತಿಗಳು ಒಂದಕ್ಕೊಂದು ತಗಲಿ ಇಂಥ ಪರಿಸ್ಥಿತಿ ಎದುರಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಸೇರಿ ಪಟ್ಟಣದ ಜನರು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಕೆಲವು ವೇಳೆ ಇಡೀ ರಾತ್ರಿ ವಿದ್ಯುತ್ ಇಲ್ಲದೆ ಪರದಾಡುವಂತ ಪರಿಸ್ಥಿತಿ ಎದುರಾಗಿದೆ ಎಂದು ವಿಜಯಪುರ ನಿವಾಸಿಗಳು ಅಲವತ್ತುಗೊಂಡಿದ್ದಾರೆ.
ಪಟ್ಟಣದ ಹಲವು ಕಡೆಗಳಲ್ಲಿ ಸಡಿಲವಾಗಿರುವ ವಿದ್ಯುತ್ ತಂತಿಗಳನ್ನು ಬಿಗಿಗೊಳಿಸುವ ಕೆಲಸ ಮಾಡಬೇಕಿದೆ. ಒಂದಕ್ಕೊಂದು ತಂತಿಗಳು ತಗುಲದಂತೆ ಬೆಸ್ಕಾಂನವರು ಕ್ರಮಕೈಗೊಳ್ಳಬೇಕಿದೆ ಇದರಿಂದ ಮುಂದೆ ಎದುರಾಗಬಹುದಾದ ವಿದ್ಯುತ್ ಅವಘಡಗಳಿಂದ ಪಾರು ಮಾಡಬೇಕಾಗಿದೆ. ಈ ಬಗ್ಗೆ ಬೆಸ್ಕಾಂಗೆ ಮನವಿ ಮಾಡಲಾಗಿದೆ ತುರ್ತು ಕ್ರಮಕೈಗೊಳ್ಳಬೇಕಿದೆ.
ವ.ಸುರೇಶ್ ಬಾಬು, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ