

ಮೊಳಕಾಲ್ಮೂರು: ವಿದ್ಯುತ್ ಕ್ಷೇತ್ರ ಖಾಸಗೀಕರಣ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ನುಂಕಪ್ಪನ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಮುಖ್ಯರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮಗೆ ಇಷ್ಟ ಬಂದಂತೆ ಕಾನೂನು ರೂಪಿಸುತ್ತಿವೆ. ಆದರೆ, ಅದನ್ನು ಪ್ರಶ್ನಿಸುವ ಶಕ್ತಿ ಹಸಿರು ಶಾಲಿಗಿದೆ ಎಂದರು.
ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ವಿವಿಧ ಕ್ಷೇತ್ರಗಳ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರದ ನಡೆ ಸರಿಯಲ್ಲ. ಇದಕ್ಕೆ ತಕ್ಕ ಬೆಲೆ ತರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್ ಬಾಬು ಮಾತನಾಡಿ, ಹಿಂಬಾಗಿಲಿಂದ ಶ್ರೀಮಂತರ ನೆರವು ಪಡೆದು ಅಧಿಕಾರ ನಡೆಸುತ್ತಿರುವ ರಾಜಕೀಯ ಶಕ್ತಿಗಳು ಅವರ ಬಯಕೆ ಈಡೇರಿಸಲು ಮುಂದಾಗಿವೆ. ಇಂತಹ ಗುಲಾಮಗಿರಿ ಪದ್ಧತಿ ನಾವು ಒಪ್ಪುವುದಿಲ್ಲ ಎಂದರು.
ಮುಖಂಡರಾದ ಆರ್.ಬಿ.ನಿಜಲಿಂಗಪ್ಪ, ನುಲೇನೂರು ಎಂ.ಶಂಕ್ರಪ್ಪ, ಬೆಳಗಲ್ ಈಶ್ವರಯ್ಯಸ್ವಾಮಿ, ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ್ಯ, ಶಿವಕುಮಾರ, ಲಕ್ಮೀಕಾಂತ್, ತಿಪ್ಪೇಸ್ವಾಮಿ, ರಂಗಸ್ವಾಮಿ, ಡಿ.ಚಂದ್ರಶೇಖರ ನಾಯ್ಕ, ಹನುಮಂತರೆಡ್ಡಿ, ರವಿಕುಮಾರ, ಕೃಷ್ಣಸ್ವಾಮಿ, ರಾಜಣ್ಣ, ಡಿ.ಮಲ್ಲಿಕಾರ್ಜುನ, ಚಂದ್ರಣ್ಣ, ನೀಲಪ್ಪ, ಕನಕಶಿವಮೂರ್ತಿ ಇತರರಿದ್ದರು.