

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಮೆಸ್ಕಾಂ ಇಲಾಖೆಯಿಂದ ಮೂರು ದಿನ ಆಯೋಜಿಸಲಾದ ವಿದ್ಯುತ್ ಕಂಬ ಹತ್ತಿ ಇಳಿಯುವ ಉಚಿತ ತರಬೇತಿಗೆ ಕುಂದಾಪುರ ಗಾಂಧಿ ಮೈದಾನದಲ್ಲಿ ಸೋಮವಾರ ಚಾಲನೆ ದೊರೆಯಿತು.
ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್ ಮಾತನಾಡಿ, ಕರ್ನಾಟಕ ವಿದ್ಯುತ್ ಪ್ರಸರನ ನಿಗಮದಿಂದ ಕಿರಿಯ ಮಾರ್ಗದಾಳು ನೇಮಕಾತಿ ನಡೆಯಲಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಮೆಸ್ಕಾಂ ವತಿಯಿಂದ ವಿದ್ಯುತ್ ಕಂಬ ಹತ್ತಿ ಇಳಿಯುವ ತರಬೇತಿ ನೀಡಲಾಗುತ್ತಿದೆ ಎಂದರು.
80 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಮೆಸ್ಕಾಂ ಕುಂದಾಪುರ ವಿಭಾಗದ ಸಿಬ್ಬಂದಿ ವಿದ್ಯುತ್ ಕಂಬ ಹತ್ತಿ ಇಳಿಯಲು ಮಾರ್ಗದರ್ಶನ ನೀಡಿದರು. ತರಬೇತಿಯಲ್ಲಿ ಸ್ಥಳೀಯ ಹುಡುಗಿ ನಯನಾ ಭಾಗವಹಿಸಿದ್ದು ವಿಶೇಷವಾಗಿತ್ತು.
ತರಬೇತಿ ವೇಳೆ ಕೆಲವು ಯುವಕರು ಮೆಸ್ಕಾಂ ಸಿಬ್ಬಂದಿ ಬಳಿ ಸ್ಥಳೀಯರಿಗೆ ಮೆಸ್ಕಾಂ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು. ಈ ಸಂದರ್ಭ ಕೇವಲ ಎಸ್ಸೆಸ್ಸೆಲ್ಸಿ ಅಂಕ ಮಾತ್ರ ಪರಿಗಣಿಸದೇ ಎಲ್ಲ ರೀತಿಯಿಂದಲೂ ಪರಿಶೀಲಿಸಬೇಕು. ಈ ಕುರಿತು ಶಾಸಕ, ಸಂಸದ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.