ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆಗಳ ಬಲ

shrathkrisnamurthi
Published on

ಕಡೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಅಭ್ಯರ್ಥಿ ಶ್ರೇಯಸ್ ಗೆಲುವಿಗೆ ವರದಾನ ಎಂದು ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಹೇಳಿದರು.

ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ರಾಜ್ಯದ ಜನರನ್ನು ಕೆರಳಿಸಿದೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬಗೆಹರಿಸುವ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನುಡಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಜನರಿಗೆ ನೀಡಿದ ಭರವಸೆಯನ್ನು ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಜಾರಿ ಮಾಡಿ ನುಡಿದಂತೆ ನಡೆದ ಸಿದ್ದರಾಮಯ್ಯ ಅವರ ಆಡಳಿತ ಜನರಿಗೆ ಮನದಟ್ಟಾಗಿದೆ. ಕೇಂದ್ರಕ್ಕೆ ಜಿಎಸ್‌ಟಿ ಕೊಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ರಾಜ್ಯಕ್ಕೆ ಕೇವಲ ಶೇ.13 ಬರುತ್ತಿದೆ. ಹೀಗೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಬಹಳಷ್ಟು ಅನ್ಯಾಯ ಮಾಡಿದೆ. ಆದರೆ ಇದ್ಯಾವುದಕ್ಕೂ ಬಗ್ಗದೆ ರಾಜ್ಯ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥವಾಗಿ ಮುನ್ನಡೆಸುತ್ತಿದ್ದು, ಜನಪರ ಆಡಳಿತ ನೀಡುತ್ತಿದ್ದಾರೆ ಎಂದರು.
ಶಾಸಕ ಕೆ.ಎಸ್.ಆನಂದ್ ಅವರು ಕ್ಷೇತ್ರಕ್ಕೆ 10 ತಿಂಗಳ ಅವಧಿಯಲ್ಲಿ ಆದ್ಯತೆ ಮೇರೆಗೆ 280 ಕೋಟಿ ರೂ. ಅನುದಾನ ತಂದು ಅಭಿವೃದ್ಧಿಗೊಳಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ, ಸಂಸದ ಪ್ರಜ್ವಲ್ ಕ್ಷೇತ್ರವನ್ನು ಮರೆತ ಪರಿಣಾಮ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಬಲಿಷ್ಠಗೊಂಡಿದೆ. ಅಭಿವೃದ್ಧಿ ಮತ್ತು ಬದುಕಿನ ಭರವಸೆಗೆ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು. ಮುಖಂಡರಾದ ಕಂಸಾಗರ ತ್ಯಾಗರಾಜ್, ಚಟ್ನಳ್ಳಿ ಲೋಕೇಶ್, ಚಂದ್ರು ಅಗ್ನಿ, ವೈ.ಮಲ್ಲಾಪುರ ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net