ಶರಣ ತತ್ವಕ್ಕಿದೆ ದೇಶ ಬದಲಾವಣೆ ಶಕ್ತಿ ಬಸವಲಿಂಗಮೂರ್ತಿ ಸ್ವಾಮೀಜಿ

1000306969_20240810234844129.jpg
Published on

ದಾವಣಗೆರೆ: ವಚನ ಸಾಹಿತ್ಯದಲ್ಲಿ ಸಾವಿರಾರು ವಿಚಾರಗಳಿವೆ, ಕಾಯಕ ಸಿದ್ಧಾಂತ ದಾಸೋಹದ ಪರಿಕಲ್ಪನೆ ಇದೆ. ಶರಣ ತತ್ವವನ್ನು ಎಲ್ಲರೂ ಅಳವಡಿಸಿಕೊಂಡರೆ ಭಾರತ ದೇಶವನ್ನೇ ಬದಲಿಸಬಹುದು ಎಂದು ಮೈಸೂರಿನ ಬಸವ ಧ್ಯಾನ ಮಂದಿರದ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ವಿರಕ್ತಮಠದಲ್ಲಿ ಹಮ್ಮಿಕೊಂಡಿರುವ, ಕಲ್ಯಾಣದಿಂದ ಉಳವಿಯೆಡೆಗೆ-114ನೇ ವರ್ಷದ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿ ವಚನಗಳು ಸರ್ವ ಕಾಲಕ್ಕೂ ಅನುಕರಣೀಯವಾಗಿವೆ. ಬಸವಾದಿ ಶರಣರ ಕಾಯಕ ದಾಸೋಹದ ಪರಿಕಲ್ಪನೆ ಜಾರಿಗೆ ಬಂದರೆ ಖಂಡಿತ ಈ ದೇಶ ಸಮೃದ್ಧವಾಗುವುದರಲ್ಲಿ ಸಂದೇಹವಿಲ್ಲ ಎಂದರು.  
ಪ್ರತಿಯೊಬ್ಬರೂ  ದುಡಿದು ತಿನ್ನಬೇಕು ಎಂಬುದೇ ಬಸವಣ್ಣನವರು ಸ್ಥಾಪಿಸಿದ ಮಹಾಮನೆಯ ಹಾಗೂ ಅನುಭವ ಮಂಟಪದ ಮೂಲ ಉದ್ದೇಶವಾಗಿತ್ತು. ಆಗ ಕಲ್ಯಾಣದಲ್ಲಿ ನೀಡುವವರು ಇದ್ದರು. ಹಾಗಾಗಿ ಅಂದು ಬಡತನ ಇರಲಿಲ್ಲ. ಕಾಯಕ ಮಾಡಿ ತಮಗೂ ಇಟ್ಟುಕೊಂಡು ದಾಸೋಹಕ್ಕೆ ಕೊಡುತ್ತಿದ್ದರು. ಹಾಗಾಗಿ ಬಸವಕಲ್ಯಾಣ ಸಂಪದ್ಭ್ಭರಿತವಾಗಿತ್ತು ಎಂದು ತಿಳಿಸಿದರು.
ದುಡಿಯದೇ ಪ್ರಸಾದ ಸ್ವೀಕರಿಸಬಾರದು ಎಂಬುದು ಶರಣರ ಆದ್ಯತೆಯಾಗಿತ್ತು. ದುಡಿಯಬೇಕು, ದುಡಿದು ನಮಗೆ ಹೆಚ್ಚಾಗಿದ್ದನ್ನು ಅಂಗವಿಕಲರು,  ದುರ್ಬಲರಿಗೆ ನೀಡಬೇಕು ಎಂಬುದು ಶರಣರ ಮೂಲ ಆಸೆಯಾಗಿತ್ತು. ಕಾಯಕದಿಂದ ಶರೀರವು ಕೂಡ ಸುಸ್ಥಿತಿಯಲ್ಲಿ ಇರುತ್ತದೆ. ಕಾಯಕಜೀವಿ ಎಂದಿಗೂ ರೋಗರುಜಿನಕ್ಕೆ ತುತ್ತಾಗಲಾರ ಹಾಗೂ ಬೇರೆಯವರ ಅಧೀನದಲ್ಲಿ ಇರಲು ಇಚ್ಛಿಸಲಾರ ಎಂದು ಹೇಳಿದರು.
ಕಾಯಕವಿಲ್ಲದವರಿಗೆ ಕಲ್ಯಾಣದಲ್ಲಿ ಪ್ರವೇಶವಿರಲಿಲ್ಲ. ಕಲ್ಯಾಣಕ್ಕೆ ಬಂದ ಪ್ರತಿಯೊಬ್ಬರೂ ಕಾಯಕ ಮಾಡಬೇಕಾಗಿತ್ತು. ದುಡಿದು ತಿನ್ನುವ ಬದಲಾಗಿ ಬಡಿದು ತಿನ್ನುವ ವ್ಯವಸ್ಥೆ ಕಲ್ಯಾಣದಲ್ಲಿ ಇರಲಿಲ್ಲ. ಆದ್ದರಿಂದ ಕಾಯಕ, ದಾಸೋಹ ಎರಡೂ ಸಹ ಮಾನವ ಮತ್ತು ಆತನ ಮನಸ್ಸು, ದೇಶವನ್ನು ಉದ್ಧಾರ ಮಾಡುವ ಮಾರ್ಗವಾಗಿದೆ ಎಂದು ಪ್ರತಿಪಾದಿಸಿದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net