

ಉಡುಪಿ: ರಾಜ್ಯ ಸರ್ಕಾರ 5 ಗ್ಯಾರೆಂಟಿ ಯೋಜನೆಗಳನ್ನು ಕ್ರಮಬದ್ಧವಾಗಿ ಜಾರಿಗೊಳಿಸಿದೆ. ಬಜೆಟ್ನಲ್ಲೇ ಅನುದಾನವನ್ನು ಒದಗಿಸಲಾಗಿದೆ. ಇಲಾಖೆಗಳ ಹಣ ಸರ್ಕಾರವೇ ಭರಿಸುತ್ತಿದೆ. ಹೀಗಾಗಿ ಇಲಾಖೆಗಳಿಗೆ ಹೊರೆಯಾಗುತ್ತಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಧನ ಇಲಾಖೆಯಲ್ಲಿ 1.65 ಕೋಟಿ ಗ್ರಾಹಕರು ಶೂನ್ಯ ಬಿಲ್ ಪಡೆದಿದ್ದಾರೆ. ಬಿಲ್ ಮೊತ್ತವನ್ನು ಸರ್ಕಾರ ಪಾವತಿ ಮಾಡಿದೆ ಎಂದರು.
ಕಾಂಗ್ರೆಸ್ ಧ್ಯೇಯ ಧೋರಣೆ ಬದಲಾಗಿಲ್ಲ. ದೇಶದ ಅಭಿವೃದ್ಧಿ ಅನೇಕ ಕೊಡುಗೆಗಳನ್ನು ನೀಡಿದೆ. ಇಂದು ದೇಶದ ಗೋಡಾನ್ ಗಳಲ್ಲಿ ಅಕ್ಕಿ&ಧಾನ್ಯ ತುಂಬಿ ತುಳುಕಲು ಹಸಿರು ಕ್ರಾಂತಿ ಕಾರಣವಾಗಿದೆ. ಆದರೆ ಧರ್ಮ, ಜಾತಿ ಆಧಾರದಲ್ಲಿ ಬಿಜೆಪಿ ಸಮಾಜವನ್ನುಒಡೆಯುವ ಕೆಲಸ ಮಾಡುತ್ತಿದೆ. ರಚನಾತ್ಮಕ ಕಾರ್ಯಗಳ ಮೂಲಕ ಮತದಾರರ ಮನ ಗೆಲ್ಲಬೇಕು. ಬಿಜೆಪಿ 10 ವರ್ಷಗಳ ಆಡಳಿತದಲ್ಲಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಕಳೆದ 1 ವರ್ಷದಲ್ಲಿ ಒಂದು ಬಾರಿಯೂ ಚಿಕ್ಕಮಗಳೂರು ಜಿಲ್ಲಾ ಕೆಡಿಪಿ ಸಭೆಗೆ ಬಂದಿಲ್ಲ. ನಾನೇ ಅಲ್ಲಿ ಉಸ್ತುವಾರಿ ಸಚಿವನಾಗಿದ್ದೆ. ಇಂಥ ಕಾರಣಗಳಿಗಾಗಿಯೇ ಬಿಜೆಪಿಯವರೇ ಅವರಿಗೆ ಗೋ ಬ್ಯಾಕ್ ಹೇಳಿದ್ದರು. ವಿಧಾನ ಪರಿಷತ್ನಲ್ಲಿ 6 ತಿಂಗಳಲ್ಲಿ ವಿರೋಧ ಪಕ್ಷದ ನಾಯಕರೇ ಇರಲಿಲ್ಲ. ಇತ್ತೀಚೆಗೆ ನೇಮಕ ಮಾಡಿದವರನ್ನೇ ಬಿಜೆಪಿ ಲೋಕಸಭೆಗೆ ಕಣಕ್ಕಿಳಿಸಿದೆ. ಬೇರೆ ನಾಯಕರೇ ಸಿಗಲಿಲ್ಲವೇ ಎಂದು ಪ್ರಶ್ನಿಸಿದರು.
ಯುಪಿಸಿಎಲ್ 2ನೇ ಹಂತಕ್ಕೆ ಬೆಂಬಲ
ಯುಪಿಸಿಎಲ್&ಅದಾನಿ ಕಂಪೆನಿ ಖಾಸಗಿಯಾಗಿದ್ದು, 2ನೇ ಹಂತದ ವಿಸ್ತರಣೆ ಮಾಡಲು ಬಯಸಿದರೆ ರಾಜ್ಯಸರ್ಕಾರದಿಂದ ಸಹಕಾರ ನೀಡಲಾಗುವುದು. ಇತ್ತೀಚಿನ ದಿನಗಳಲ್ಲಿ ವಿದ್ಯುತ್ಗೆ ಬಹು ಬೇಡಿಕೆ ಇದೆ. ಹೀಗಾಗಿ ಮಂಗಳೂರಿನಲ್ಲಿ ಗ್ರೀನ್ ಹೈಡ್ರೋಜನ್ ಎನರ್ಜಿ ಪ್ರಾಯೋಗಿಕ ಯೋಜನೆ ಜಾರಿಗೊಳಿಸಲಾಗುವುದು ಎಂದರು.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರೊಬ್ಬರ ಮಗಳನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ$್ಯ ನೀಡಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ , ಮುಖಂಡರಾದ ನವೀನ್ ಚಂದ್ರ ಶೆಟ್ಟಿ, ಕೆ.ಕೆ. ಮಂಜುನಾಥ್, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.