

ಕೊಪ್ಪಳ: ಮಳೆ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಅಭಾವ ಎದುರಾಗಿದೆ. ಆದರೂ, ರೈತರ ಹಿತದೃಷ್ಟಿಯಿಂದ ಕಡ್ಡಾಯವಾಗಿ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿರುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನನ್ನ ಕ್ಷೇತ್ರ ಕನಗಿರಿಯಲ್ಲಿ ವಿದ್ಯುತ್ ಅಭಾವವಾಗುತ್ತಿರುವ ಬಗ್ಗೆ ದೂರುಗಳಿರುವುದು ನನ್ನ ಗಮನಕ್ಕಿದೆ. ಈ ಸಂಬಂಧ ಜೆಸ್ಕಾಂ ಅಧಿಕಾರಿಗಳಿಗೆ ಮಾತನಾಡಿರುವೆ. ಭತ್ತಕ್ಕೆ ಹೆಚ್ಚಿನ ನೀರು ಬೇಕು.
ಜಲಾಶಯದಲ್ಲಿ ನೀರಿನ ಕೊರತೆ ಆಗುತ್ತಿದೆ. ವಿದ್ಯುತ್ ನೀಡಿದಲ್ಲಿ ಬೋರ್‌ವೆಲ್ ಸೌಲಭ್ಯ ಇರುವವರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿರುವೆ. ರೈತರು ಚಿಂತಿಸುವ ಅಗತ್ಯವಿಲ್ಲವೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಕೇವಲ ಅನ್ಯ ಪಕ್ಷದವರನ್ನೇ ಗುರಿಯಾಗಿಸಿ ಐಟಿ, ಇಡಿ, ಸಿಬಿಐ ದಾಳಿ ನಡೆಸುತ್ತಾರೆ. ಬಿಜೆಪಿಯವರಲ್ಲಿ ಯಾರೂ ಅಕ್ರಮವಾಗಿ ಹಣ ಗಳಿಸಿದವರು ಇಲ್ಲವಾ ? ಎಎಪಿ, ಟಿಡಿಪಿ, ಕಾಂಗ್ರೆಸ್ ನಾಯಕರು ಮಾತ್ರ ಇವರಿಗೆ ಕಾಣುತ್ತಾರೆ.
ಇವರ ಅಧಿಕಾರವಧಿಯಲ್ಲಿ ಏನೇನು ಮಾಡಿದ್ದಾರೆಂದು ಜನತೆಗೆ ಗೊತ್ತಿದೆ. ಅದಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಹೀನಾಯವಾಗಿ ಸೋಲಿಸುತ್ತಾರೆ ಎಂದು ಕಿರಿಕಾರಿದರು.
ಬಿಜೆಪಿ ಅವಧಿಯಲ್ಲಿ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರನ್ನ ನೇಮಿಸಿಲ್ಲ. ಆಗೆಲ್ಲ ಯಾರೂ ಪ್ರಶ್ನಿಸಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ. ಇನ್ನೊಂದು ತಿಂಗಳಲ್ಲಿ ಎಲ್ಲ ನೇಮಕಾತಿ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಮಟ್ಕಾ, ಜೂಜಾಟ ಬಂದ್ ಮಾಡಿಸಿದ್ದೇವೆ. ಪರವಾನಗಿ ಹೊಂದಿದವರು ಮರಳು ಸಾಗಣೆ ಮಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿ ಯಾವುದೇ ಗಣಿ ಪರವಾನಗಿ ಇಲ್ಲ. ಒಂದೊಮ್ಮೆ ಇದ್ದರೆ, ನನ್ನ ವಿರುದ್ಧ ಅಕ್ರಮ ಗಣಿಗಾರಿಕೆ ಮಾಡುತ್ತಿರುವುದಾಗಿ ಆರೋಪಿಸುವವರಿಗೆ ಬರೆದು ಕೊಡುವೆ. ಶಿವರಾಜ ತಂಗಡಗಿ. ಜಿಲ್ಲಾ ಉಸ್ತುವಾರಿ ಸಚಿವ ಕೊಪ್ಪಳ.
ಶಿವರಾಜ ತಂಗಡಗಿ. ಜಿಲ್ಲಾ ಉಸ್ತುವಾರಿ ಸಚಿವ ಕೊಪ್ಪಳ.