ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ಹಗಲುಗನಸು

Power in the state is a daydream for BJP
ಬಿ.ಎಸ್.ಸಿಂಧೂರ
Published on

ಜಮಖಂಡಿ: ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಕ್ರಾಂತಿಕಾರಿ ಹಾಗೂ ಬಡವರ ಅಭಿವೃದ್ಧಿ ಪರ ಯೋಜನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಇನ್ನೂ 20 ವರ್ಷ ಬಿಜೆಪಿಯವರು ಅಧಿಕಾರದ ಹಗಲುಗನಸು ಕಾಣುತ್ತ ಕುಳಿತುಕೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್- ರೈತ ಮುಖಂಡ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಎಸ್.ಸಿಂಧೂರ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಬಡವರಿಗೆ ಯೋಜನೆಗಳನ್ನು ನೀಡುವುದು ಬಿಟ್ಟು ಹಿಂದು- ಮುಸ್ಲಿಂ ಅಂತ ಕಾಲಹರಣ ಮಾಡಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡಿದ್ದರಿಂದ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ನಾಯಕರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅಂತ ನಾಯಕರನ್ನು ಕಡೆಗಣಿಸಿ ಪರ್ಯಾಯ ನಾಯಕತ್ವ ಬೆಳೆಸಿಕೊಳ್ಳುವ ಹುನ್ನಾರ ಬಿಜೆಪಿಯಲ್ಲಿ ನಡೆದಿದ್ದಕ್ಕೆ ಆ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ಜೋಡೆತ್ತಿನಂತೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಹದಗೆಡಿಸಿದ್ದರು. ಇದರ ಮಧ್ಯೆ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ನಮಗೂ ಅನುಮಾನ ಇತ್ತು. ಆದರೆ ಸಿಎಂ, ಡಿಸಿಎಂ ಅನುದಾನ ಕ್ರೋಡೀಕರಿಸುವಲ್ಲಿ ಯಶಸ್ವಿಯಾಗಿ ರಾಜ್ಯದ ಮಹಿಳೆಯರು, ಬಡವರಿಗೆ ಕ್ರಾಂತಿಕಾರಕ ಯೋಜನೆಗಳನ್ನು ಎಲ್ಲರಿಗೂ ಮುಟ್ಟಿಸುತ್ತಿದ್ದಾರೆ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 18 ರಿಂದ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡಲು ಜನರು ಕಾತುರರಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net