ವಿರಾಜಪೇಟೆಯಲ್ಲಿ ವಿದ್ಯುತ್‌ಜಾಲ ಬಲವರ್ಧನೆ

Oplus_16908288
Published on

ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಜಾಲ ಬಲವರ್ಧನೆಯ ಕಾಮಗಾರಿಗಳು ವೇಗವಾಗಿ ಸಾಗಿವೆ. ನೂತನ ಕಂಬಗಳ ಸ್ಥಾಪನೆ ಹಾಗೂ ಎ.ಬಿ.ಕೇಬಲ್ ಅಳವಡಿಕೆಯಿಂದ ಸೆಸ್ಕ್ ಸಿಬ್ಬಂದಿ ಹಾಗೂ ತೋಟದ ಕಾರ್ಮಿಕರಿಗೂ ಪೂರ್ಣ ಸುರಕ್ಷೆ ಸಿಗುವ ಕಾಲ ಸನ್ನಿಹಿತವಾಗಿದೆ.

ಜಿಲ್ಲೆಯಲ್ಲಿ ಮಳೆಗಾಲದ ಆರಂಭದೊಂದಿಗೆ ಸಾರ್ವಜನಿಕರಿಗೆ ಕಾಡುವ ಬಹಳ ದೊಡ್ಡ ಸಮಸ್ಯೆ ಎಂದರೆ ವಿದ್ಯುತ್ ವ್ಯತ್ಯಯ. ಇನ್ನು ವಿರಾಜಪೇಟೆ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶಗಳು ಹೆಚ್ಚು ಬೆಟ್ಟ, ಗುಡ್ಡಗಳಿಂದ ಕೂಡಿದ್ದು ಪ್ರತಿ ಗ್ರಾಮ ಉತ್ತಮ ರೀತಿಯಲ್ಲಿ ವಿದ್ಯುತ್ ಸಂಪರ್ಕವನ್ನು ಹೊಂದಿದೆ.

ಆದರೆ ಈ ವಿದ್ಯುತ್ ಸಂಪರ್ಕದ ಲೈನ್ ತೋಟಗಳ ಮೂಲಕ ಹಾದು ಹೋಗುವುದರಿಂದ ಮಳೆಗಾಲದಲ್ಲಿ ಮಾತ್ರ ಕೆಲವು ದಿನ ವಿದ್ಯುತ್ ಸಂಪರ್ಕ ಕಡಿತಗೊಂಡು ನಿವಾಸಿಗಳು ವಾರಗಟ್ಟಲೇ ಕಗ್ಗತ್ತಲೆಯಲ್ಲೇ ಕಾಲ ಕಳೆಯಬೇಕಿದೆ. ವಿರಾಜಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಾಂದ್ರತೆ ಕಡಿಮೆ ಇರುವ ಕಾರಣ ಎಲ್ಲಿಯೋ ಗುಂಪು ಮನೆಗಳು ಕಾಣಸಿಗುವುದಿಲ್ಲ. ಪ್ರತಿಯೊಬ್ಬರು ಅವರವರ ತೋಟಗಳ ನಡುವೆ ಮನೆಯನ್ನು ನಿರ್ಮಿಸಿಕೊಂಡಿರುವುದರಿಂದ ವಿದ್ಯುತ್ ಸಂಪರ್ಕದ ಲೈನ್ ತೋಟಗಳ ಮೂಲಕವೇ ಹಾದು ಹೋಗಿದೆ.

ಇದರಿಂದಾಗಿ ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಲೈನ್‌ಗಳ ಮೇಲೆ ಅಥವಾ ವಿದ್ಯುತ್ ಕಂಬಗಳ ಮೇಲೆ ಮರ ಅಥವಾ ಮರದ ಕೊಂಬೆಗಳು ಬಿದ್ದು ಹಾನಿಯಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿತ್ತು. ಇಂಥ ಸಂದರ್ಭದಲ್ಲಿ ಸೆಸ್ಕ್ ಸಿಬ್ಬಂದಿಗೆ ಎಲ್ಲಿ ಸಮಸ್ಯೆ ಉಂಟಾಗಿದೆ ಎಂದು ಹುಡುಕುವುದೇ ಸವಾಲಿನ ಕೆಲಸವಾಗಿತ್ತು.

ಕೆಲ ಸಂದರ್ಭ ಸೆಸ್ಕ್‌ನಿಂದ ತ್ವರಿತಗತಿಯಲ್ಲಿ ಸ್ಪಂದನೆ ದೊರೆತರೆ ಕೆಲವೊಮ್ಮೆ ಸಮಸ್ಯೆಯನ್ನು ಹುಡುಕಲು ಬಹಳ ಸಮಯ ವ್ಯರ್ಥವಾಗುತ್ತಿತ್ತು. ಆದರೆ ಇದೀಗ ಶಾಸಕರ ವಿಶೇಷ ಪ್ರಯತ್ನ ಹಾಗೂ ಮುತುವರ್ಜಿಯಿಂದ ಈ ಸಮಸ್ಯೆ ನಿವಾರಣೆಯಾಗುವ ಹಂತದಲ್ಲಿದೆ. ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ವಿತರಣಾ ಜಾಲದ ಬಲವರ್ಧನೆ ಕಾಮಗಾರಿಗಳ ಭೂಮಿಪೂಜೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಜ.25 ರಂದು ನೆರವೇರಿಸಿದ್ದಾರೆ. ತೋಟದ ಒಳಗಿನ ಲೈನ್‌ಗಳನ್ನು ರಸ್ತೆ ಬದಿಯಲ್ಲಿ ಅಳವಡಿಸುವ ಕಾರ್ಯ ಇದೀಗ ಪ್ರಗತಿಯಲ್ಲಿದ್ದು ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

120 ಕೋಟಿ ರೂ. ಅನುದಾನ

120 ಕೋಟಿ ರೂ. ಅನುದಾನದಲ್ಲಿ ಅವಶ್ಯಕತೆ ಇರುವಲ್ಲಿ ಹಳೆಯ ವಿದ್ಯುತ್ ವಾಹಕವನ್ನು ಬದಲಾಯಿಸಿ ಕವರ್ಡ್ ಕಂಡಕ್ಟರ್ ಅಳವಡಿಕೆ, ಹಳೆಯ ಟ್ರಾನ್ಸ್‌ಫಾರ್ಮರ್ ಬದಲಾವಣೆ, ಸಸ್ಪೆನ್ಷನ್ ಟ್ರಾನ್ಸ್‌ಫಾರ್ಮರ್ ಸರಿಪಡಿಸುವುದು, ವೊಲ್ಟೇಜ್ ಸಮಸ್ಯೆ ನಿರ್ವಹಣೆ ಹಾಗೂ ಮಳೆಗಾಲದಲ್ಲಿ ವಿದ್ಯುತ್ ಅಡಚಣೆಯನ್ನು ಮಿತಗೊಳಿಸಲು ಕಾಡಂಚಿನಲ್ಲಿರುವ ವಿದ್ಯುತ್ ಮಾರ್ಗವನ್ನು ಅವಶ್ಯಕ ಇರುವಲ್ಲಿ ರಸ್ತೆ ಬದಿಗೆ ತಂದು 11/66 ಕೆ.ವಿ.ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.

ಹಳೆಯ ವಿದ್ಯುತ್ ತಂತಿಗಳನ್ನು ಕವರ್ ಕಂಡಕ್ಟರ್‌ನಿಂದ ಬದಲಿಸಿ ಬಲವರ್ಧನೆಗೊಳಿಸುವುದು, ಮಳೆಗಾಲದಲ್ಲಿ ವಿದ್ಯುತ್ ಮಾರ್ಗದಲ್ಲಿನ ಅಡಚಣೆಯನ್ನು ತಪ್ಪಿಸುವ ದೃಷ್ಟಿಯಿಂದ ಹೆದ್ದಾರಿ, ಮುಖ್ಯ ರಸ್ತೆ ಪಕ್ಕದಲ್ಲಿರುವ ಎಚ್.ಟಿ.ಮುಖ್ಯ ಮಾರ್ಗಗಳ ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸಿ ಮರುಸ್ಥಾಪಿಸುವುದು, ಗ್ರಾಹಕರಿಗೆ ವೋಲ್ಟೇಜ್‌ನೊಂದಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅವಶ್ಯವಿರುವ ಕಡೆ ಹೆಚ್ಚುವರಿ ಪರಿವರ್ತಕ ಅಳವಡಿಕೆ, ಜನನಿಬಿಡ ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿ ವಿದ್ಯುತ್ ಅಪಘಾತಗಳನ್ನು ತಪ್ಪಿಸುವ ದೃಷ್ಟಿಯಿಂದ ಎಲ್.ಟಿ.ವಿದ್ಯುತ್ ಮಾರ್ಗಗಳಲ್ಲಿನ ವಿದ್ಯುತ್ ತಂತಿಗಳನ್ನು ಎ.ಬಿ.ಕೇಬಲ್ ಬಳಸಿ ಬಲವರ್ಧನೆ ಹಾಗೂ ವಿದ್ಯುತ್ ಮಾರ್ಗದಲ್ಲಿನ ಹಳೆಯ ಕಬ್ಬಿಣದ ಕಂಬಗಳ ಬದಲಾವಣೆ ಮಾಡಲಾಗುತ್ತದೆ.

ತ್ವರಿತ ಸೇವೆ, ಸಿಬ್ಬಂದಿಗೆ ಸುರಕ್ಷತೆ

ನೂತನ ಕಾಮಗಾರಿಯಿಂದ ತೋಟದೊಳಗೆ ಇರುವ ವಿದ್ಯುತ್ ಸರಬರಾಜು ಲೈನ್‌ಗಳನ್ನು ತೋಟದ ಹೊರಭಾಗ ರಸ್ತೆ ಹಿಂಬದಿಯಲ್ಲಿ ನಿರ್ಮಿಸಲಾಗುತ್ತದೆ ಹಾಗೂ ಎ.ಬಿ. ಕೇಬಲ್ನ ಬಳಕೆ ಮಾಡಲಾಗುತ್ತಿದೆ. ಎಬಿ ಕೇಬಲ್ ಬಳಕೆಯಿಂದ ಮುಖ್ಯಲೈನ್‌ನ ಕಂಬದ ಮೇಲಿನ 5 ಸಾಲುಗಳು ದೊಡ್ಡದಾದ ಒಂದೇ ತಂತಿಯ ರೂಪವನ್ನು ಪಡೆದು ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ಸುರಕ್ಷತೆ ಲಭಿಸುತ್ತಿದ್ದು, ವಿದ್ಯುತ್‌ಲೈನ್‌ನಲ್ಲಿ ಸಮಸ್ಯೆ ಎದುರಾದರೆ ತ್ವರಿತ ರೀತಿಯಲ್ಲಿ ಆ ಸಮಸ್ಯೆಯನ್ನು ಹುಡುಕಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಶಾಸಕರ ನಿರಂತರ ಪ್ರಯತ್ನದ ಫಲ

ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ನಿರಂತರವಾದ ಪ್ರಯತ್ನದ ಫಲವಾಗಿ ಕೊಡಗಿಗೆ ಈ ಯೋಜನೆಗೆ ಲಭಿಸಿದೆ. ಕೊಡಗಿನ ಇತಿಹಾಸದಲ್ಲಿ ವಿದ್ಯುತ್ ಜಾಲ ಬಲವರ್ಧನೆಗೆ ಇಷ್ಟು ದೊಡ್ಡ ಅನುದಾನ ಬಂದಿರುವುದು ಇದೇ ಮೊದಲ ಬಾರಿ. ಇದರೊಂದಿಗೆ ಹುದಿಕೇರಿ, ಮೂರ್ನಾಡು, ಸಿದ್ದಾಪುರ, ಬಾಳೆಲೆ, ಕಳತ್ಮಾಡು, ಭಾಗಮಂಡಲ, ಸಂಪಾಜೆ, ಕಾಟಕೇರಿಯಲ್ಲಿ ವಿದ್ಯುತ್ ಉಪ ಕೇಂದ್ರಗಳನ್ನು ನಿರ್ಮಾಣ ಮಾಡಿ ಬಲವರ್ಧನೆಗೊಳಿಸಿದರೆ ಶೇ.95ರಷ್ಟು ವಿದ್ಯುತ್ ಸಮಸ್ಯೆ ನಿವಾರಣೆಯಾಗುತ್ತದೆ.

ಒಟ್ಟು ಅನುದಾನದಲ್ಲಿ ವಿರಾಜಪೇಟೆ ತಾಲೂಕಿಗೆ 42 ಕೋಟಿ ರೂ. ಅನುದಾನ ಬಂದಿರುವುದು ಇದೇ ಮೊದಲು. ಶಾಸಕರ ಈ ಪ್ರಯತ್ನದಿಂದಾಗಿ ಮಳೆಗಾಲದ ಸಂದರ್ಭ ಎದುರಿಸುವ ವಿದ್ಯುತ್ ಸಮಸ್ಯೆಗೆ ಮುಕ್ತಿ ದೊರೆದಂತಾಗಿದೆ. ಇದರೊಂದಿಗೆ ಪವರ್‌ಮನ್‌ಗಳಿಗೆ ಸುರಕ್ಷತೆ ದೊರೆಯಲಿದೆ. 25 ಅಡಿಗಳಿಗೆ ಒಂದು ಕಂಬದಂತೆ ಅಳವಡಿಸಲಾಗುತ್ತಿದ್ದು, ಇದರಿಂದ ಲೈನ್‌ನ ಕೇಬಲ್ಗಳು ಪರಸ್ಪರ ಜೋತುಬಿದ್ದು ಶಾರ್ಟ್‌ಸರ್ಕ್ಯೂಟ್ ಆಗುವುದನ್ನು ತಪ್ಪಿಸಿದಂತಾಗಿದೆ. ರೋಟಿನ್ ಸಸ್ಪೆನ್ಸ್ ಎಂಡ್‌ನಿಂದ ಸ್ಟ್ರಂಗ್ ಲೈನ್‌ರೋಡ್ ತರುವ ಕಾರ್ಯ ವೇಗವಾಗಿ ನಡೆಯಲು ಶಾಸಕರು ವಹಿಸಿದ ಶ್ರಮ ಅಪಾರವಾಗಿದೆ.

ಶಾಸಕರೊಂದಿಗೆ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹಾಗೂ ಎಂ.ಡಿ.ವೇಣುಗೋಪಾಲರಾಜ್ ಅವರು ಕೊಡಗಿನಲ್ಲಿ ವಿದ್ಯುತ್‌ಜಾಲ ಬಲವರ್ಧನೆಗೆ ಹೆಚ್ಚಿನ ಆಸಕ್ತಿಯನ್ನು ವಹಿಸಿದ್ದಾರೆ. ಸಿಬ್ಬಂದಿ ಕೊರತೆ ಇರುವುದರಿಂದ ಬೇರೆಡೆಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ಈ ಕೆಲಸಕ್ಕಾಗಿ ಕಳುಹಿಸಿ ಕೊಡುತ್ತಿದ್ದಾರೆ. ಕರ್ತವ್ಯನಿರ್ವಹಿಸಲು ವಾಹನಗಳನ್ನು ಒದಗಿಸಿ ತ್ವರಿತಗತಿಯಲ್ಲಿ ನಡೆಯಲು ನೆರವನ್ನು ನೀಡುವುದರೊಂದಿಗೆ ಅರೆಕಾಲಿಕವಾಗಿ ಕೆಲಸವನ್ನು ನಿರ್ವಹಿಸಲು ಸಿಬ್ಬಂದಿ ಪೂರೈಸುತ್ತಿದ್ದಾರೆ. ಅಲ್ಲದೆ ಸಿಬ್ಬಂದಿ ವೇತನವನ್ನು ಸಮಯಕ್ಕೆ ಸರಿಯಾಗಿ ಒದಗಿಸುತ್ತಿದ್ದು ಇಷ್ಟು ವೇಗದಲ್ಲಿ ಕೆಲಸ ನಡೆಯಲು ಇದು ಒಂದು ಕಾರಣವಾಗಿದೆ. ಸದ್ಯಕ್ಕೆ ಇಬ್ಬರು ಕೊಡಗಿನಲ್ಲಿ ಸಂಚಾರ ಮಾಡುತ್ತ ಕಾಮಗಾರಿ ವೀಕ್ಷಣೆಯನ್ನು ಮಾಡಿ ಸೆಸ್ಕ್‌ಗೆ ಬೇಕಾದ ಎಲ್ಲ ರೀತಿಯ ನೆರವನ್ನು ನೀಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ದೊಡ್ಡ ಮಟ್ಟದ ಕಾಮಗಾರಿ ನಡೆಯಲು ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರಯತ್ನ ಅಪಾರ. ಮೊದಲು ಸಣ್ಣ ಕಡ್ಡಿ ಬಿದ್ದರೂ ಸಂಪೂರ್ಣ ಲೈನ್ ವಿದ್ಯುತ್ ಸರಬರಾಜು ಸ್ಥಗಿತವಾಗುತ್ತಿತ್ತು. ಇದೀಗ ಎ.ಬಿ.ಕೇಬಲ್ ಬಳಕೆಯಿಂದ ಈ ಸಮಸ್ಯೆ ನಿವಾರಣೆಯಾಗಲಿದೆ. ಇದೀಗ ಗ್ರಾಮೀಣ ಭಾಗಗಳಿಗೆ ಹೋಗುವ ಮುಖ್ಯ ಲೈನ್‌ಗಳನ್ನು ರಸ್ತೆಯ ಬದಿ ಹಾಕಲಾಗುತ್ತಿದ್ದು ಇನ್ನು ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಪಿ.ಎಸ್.ಸುರೇಶ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕಾರ್ಯ ಮತ್ತು ಪಾಲನೆ ಉಪವಿಭಾಗ, ಸೆಸ್ಕ್, ವಿರಾಜಪೇಟೆ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ವಿದ್ಯುತ್ ಜಾಲ ಬಲವರ್ಧನೆಗೆ ದೊಡ್ಡ ಮೊತ್ತದ ಅನುದಾನ ಬಂದಿರುವುದು ಇದೇ ಮೊದಲು. ಯೋಜನೆಯಿಂದಾಗಿ ಮಳೆಗಾಲದಲ್ಲಿ ಕ್ಷೇತ್ರದ ಜನರು ಅನುಭವಿಸುತ್ತಿದ್ದ ವಿದ್ಯುತ್ ಸಮಸ್ಯೆ ನಿವಾರಣೆಯಾಗುತ್ತದೆ. ತೋಟದೊಳಗಿನ ಕಂಬಗಳು ರಸ್ತೆಯ ಬದಿ ಬರುವುದರಿಂದ ಕಾರ್ಮಿಕರು ಜೀವ ಭಯವಿಲ್ಲದೆ ತೋಟದೊಳಗೆ ಕೆಲಸವನ್ನು ನಿರ್ವಹಿಸಬಹುದು. ಇದೀಗ ಶೇ.60ರಷ್ಟು ಕಾಮಗಾರಿ ಪೂರ್ಣವಾಗಿದೆ. ಕಾಮಗಿರಿ ಪೂರ್ಣಗೊಳ್ಳುವವರೆಗೂ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಬಹುದು. ರಂಜಿ ಪೂಣಚ್ಚ ಪುರಸಭೆ ಸದಸ್ಯ, ವಿರಾಜಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net