ಪವರ್ ಗ್ರೀಡ್ ಘಟಕಕ್ಕೆ ಮುತ್ತಿಗೆ: ಕಾವೇರಿ ನದಿಗೆ ತಡೆಗೋಡೆ ನಿರ್ಮಾಣಕ್ಕೆ ವಿರೋಧ

SRP_08-01jpg
Published on

ಶ್ರೀರಂಗಪಟ್ಟಣ: ತಾಲೂಕಿನ ಕಾವೇರಿ ನದಿ ಮಧ್ಯದಲ್ಲಿನ ಖಾಸಗಿ ವಿದ್ಯುತ್ ಉತ್ಪಾದನಾ ಸ್ಥಾವರದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ತಡೆಗೋಡೆ ಕಾಮಗಾರಿ ವಿರೋಧಿಸಿ ದೊಡ್ಡಪಾಳ್ಯ ಗ್ರಾಮಸ್ಥರು ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ದೊಡ್ಡಪಾಳ್ಯ ದೊಡ್ಡಿ ಸಮೀಪದ ಕಾವೇರಿ ನದಿ ಮಧ್ಯದಲ್ಲಿ ಹರಿಯುವ ನೀರಿನಿಂದ 6 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಸೋಹಾನ್ ಪವರ್ ಗ್ರೀಡ್ ಘಟಕಕ್ಕೆ ಬುಧವಾರ ಸಂಜೆ ನೂರಾರು ರೈತರು ಮುತ್ತಿಗೆ ಘಟಕದ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.

ವಿಷಯ ತಿಳಿದು ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಅವರೊಂದಿಗೆ ಆಗಮಿಸಿ ಪ್ರತಿಭಟನಾನಿರತ ರೈತರಿಂದ ಸಮಸ್ಯೆ ಆಲಿಸಿ ಸ್ಥಳ ಪರಿಶೀಲಿಸಿದರು.

ಈ ವೇಳೆ ರೈತ ಮುಖಂಡ ಮಂಜೇಶ್‌ಗೌಡ ಮಾತನಾಡಿ, ದೊಡ್ಡಪಾಳ್ಯ ಗ್ರಾಮದ ಕಾವೇರಿ ನದಿಯ ಮಧ್ಯೆಭಾಗ 2009ರಲ್ಲಿ 1 ಕಿಮೀ ಮುಂದೆ ನಿರ್ಮಿಸಬೇಕಿದ್ದ ಈ ಖಾಸಗಿ ವಿದ್ಯುತ್ ಘಟಕವನ್ನು ಪ್ರಭಾವ ಬಳಸಿ 900 ಮೀಟರ್ ಹಿಂದಕ್ಕೆ ನಿರ್ಮಿಸಿ, ಈ ಭಾಗದ 50-60 ಎಕರೆ ಕೃಷಿಕರ ಪಾಲಿಗೆ ಸಮಸ್ಯೆ ತಂದಿಟ್ಟಿದ್ದಾರೆ. ಘಟಕದ ಹಿಂಭಾಗ ಅಧಿಕ ನೀರು ನಿಲ್ಲುವ ಕಾರಣ ಜಮೀನುಗಳಲ್ಲಿ ಹಿನ್ನೀರಿನ ತೇವಾಂಶ ಹೆಚ್ಚಾಗಿ ರೈತರು ಬೆಳೆದ ಬೆಳೆ ಕೊಳೆಯುತ್ತಿದೆ. ಜತೆಗೆ ಮಳೆಗಾಲದಲ್ಲಿ ಪ್ರವಾಹ ಉಂಟಾಗಿ ಜಮೀನುಗಳು ಮುಳುಗಡೆಯಾಗಿ ಬೆಳೆ ನಾಶವಾಗುತ್ತಿದೆ. ಅಲ್ಲದೆ ಫಲವತ್ತಾದ ಮಣ್ಣಿನ ಸಮೇತ ರೈತರ ಜಾನುವಾರುಗಳು ಸಹ ಕೊಚ್ಚಿಹೋಗಿವೆ. ಈ ಘಟಕಕ್ಕೆ 12 ಅಡಿ ತಡೆಗೋಡೆ ಕಟ್ಟಬೇಕಿತ್ತು, ಆದರೆ ಇದರ ಎತ್ತರವನ್ನು ಅವೈಜ್ಞಾನಿಕವಾಗಿ 22 ಅಡಿ ಕಟ್ಟಿದ್ದಾರೆ. ಈ ಹಿಂದೆ 400 ಮೀಟರ್ ಉದ್ದ ನಿರ್ಮಿಸಿದ್ದ ಉಳ್ಳಾಣಿ (ಅಡ್ಡಗಟ್ಟೆ)ಯನ್ನು 400 ಮೀಟರ್ ಉದ್ದ ಹೆಚ್ಚಿಸಿ ಸಿಮೆಂಟ್ ಉಳ್ಳಾಣಿ ನಿರ್ಮಿಸುತ್ತಿದ್ದಾರೆ. ಕಾವೇರಿ ನೀರಾವರಿ ಇಲಾಖೆಯ ಭ್ರಷ್ಟ ಅಧಿಕಾರಿಗಳ ನಿರ್ಲಕ್ಷತೆಯ ಅನುಮತಿ ಹಾಗೂ ಖಾಸಗಿ ಘಟಕದ ಈ ಅವೈಜ್ಞಾನಿಕ ಕಾಮಗಾರಿಯಿಂದ ನದಿಯಲ್ಲಿನ ತಿಟ್ಟು(ದ್ವೀಪ) ಮುಳುಗಡೆಯಾಗಿ ದೊಡ್ಡಪಾಳ್ಯ, ದೊಡ್ಡಿ, ಕೃಷ್ಣಾಪುರ(ಕಡೆಗದ್ದೆ) ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿಗಳು ಮುಳುಗಿ ಶಾಶ್ವತವಾಗಿ ಈ ಭಾಗದ ರೈತರು ಸಮಸ್ಯೆ ಎದುರಿಸಲಿದ್ದಾರೆ. ಹೀಗಾಗಿ ಈ ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲವೆ ನದಿಯ ನೀರು ಸರಾಗವಾಗಿ ಹರಿದುಹೋಗಲು 22 ಅಡಿಗಳಿಂದ 12 ಅಡಿ ತಡೆಗೋಡೆ ಇಳಿಕೆ ಮಾಡಿ ಹಾಗೂ ಉಳ್ಳಾಣಿ ನಿರ್ಮಾಣದ ಉದ್ದ ತಗ್ಗಿಸಬೇಕು ಎಂದು ಪಟ್ಟುಹಿಡಿದರು.

ರೈತರ ಮನವಿ ಆಲಿಸಿದ ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಮಾತನಾಡಿ, ತಾವು ಸಹ ಕಾಮಗಾರಿ ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಇಂಜಿನಿಯರ್ ಅವರಿಂದ ಮಾಹಿತಿ ಪಡೆಯಲಾಗಿದೆ. ರೈತರಿಗೆ ಎದುರಾಗಿರುವ ಸಮಸ್ಯೆ ಪರಿಹರಿಸಲು ತಡೆಗೋಡೆ ನಿರ್ಮಿಸಲಾಗುತ್ತಿದೆ. ಜತೆಗೆ ಪ್ರವಾಹದ ಸಂದರ್ಭದಲ್ಲಿ ಯಾವುದೇ ಅವಘಡ ಎದುರಾಗದಂತೆ ಕ್ರಮ ವಹಿಸಲಾಗುತ್ತಿದ್ದು, ರೈತರ ಜಮೀನು ಹಾಗೂ ಬೆಳೆಗಳಿಗೆ ತೊಂದರೆಯಾದಲ್ಲಿ ಕಂಪನಿಯೇ ಪರಿಹಾರ ನೀಡುವ ಭರವಸೆ ನೀಡಿ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಮಾಹಿತಿಯನ್ನು ಒದಗಿಸಲಾಗುವುದು ಎಂದು ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟರು.

ಖಾಸಗಿ ವಿದ್ಯುತ್ ಘಟಕದ ವ್ಯವಸ್ಥಾಪಕ ಶರತ್ ಕುಮಾರ್, ರಾಜಸ್ವ ನೀರಿಕ್ಷಕ ಮಂಜುನಾಥ್, ಗ್ರಾಮಲೆಕ್ಕಿಗ ಲಕ್ಕಪ್ಪ, ಮುಖಂಡರಾದ ಜಯರಾಮೇಗೌಡ, ಡಿ.ಎಚ್.ಚಂದ್ರಶೇಖರ್, ಡಿ.ಎಂ.ಕೃಷ್ಣೇಗೌಡ, ಜಮೀನಿನ ಲೋಕೇಶ್, ಶಿವರಾಮು, ರಾಜು, ಬದುಕು, ಕೃಷ್ಣಾಪುರ ಗ್ರಾಮದ ಅಶೋಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net