ಗ್ರೀನ್ ಫೀಲ್ಡ್ ಯೋಜನೆಗೆ ಜಿಲ್ಲೆಯ 8 ಗ್ರಾಮಗಳು ಆಯ್ಕೆ

New Hescom power Cut New
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಅಸಾಂಪ್ರದಾಯಿಕ ಇಂಧನ ಮೂಲ ಹೆಚ್ಚಿಸಲು, ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಗ್ರೀನ್ ಫೀಲ್ಡ್ ಯೋಜನೆಗೆ ಬೆಳಗಾವಿ ಜಿಲ್ಲೆಯ ಎಂಟು ಗ್ರಾಮಗಳು ಆಯ್ಕೆಗೊಂಡಿವೆ.

ರಾಜ್ಯದಲ್ಲಿ ಎರಡು ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಗ್ರೀನ್ ಫೀಲ್ಡ್ ಯೋಜನೆಯ ಎರಡನೇ ಹಂತದಲ್ಲಿ ನಿಪ್ಪಾಣಿ ತಾಲೂಕಿನ ಅಪ್ಪಾಚಿವಾಡಿ, ಗೋಕಾಕ ತಾಲೂಕಿನ ಪಾಮಲದಿನ್ನಿ, ಸವದತ್ತಿ ತಾಲೂಕಿನ ಸವದತ್ತಿ ಜಾಕ್‌ವೇಲ್, ಬೈಲಹೊಂಗಲ ತಾಲೂಕಿನ ಗಣಿಕೊಪ್ಪ, ಮೂಡಲಗಿ ತಾಲೂಕಿನ ಪಿ.ವೈ.ಹುಣಶ್ಯಾಳ, ಸವದತ್ತಿ ತಾಲೂಕಿನ ಮುರಗೋಡ, ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಹಾಗೂ ಕೆಂಚಿನಹಟ್ಟಿ ಗ್ರಾಮದಲ್ಲಿ 110 ಕೆವಿ ಸಾಮರ್ಥ್ಯದ ಸಬ್ ಸ್ಟೇಷನ್‌ಗಳು ನಿರ್ಮಾಣಗೊಳ್ಳಲಿವೆ.

ವಿದ್ಯುತ್ ಉತ್ಪಾದನೆ ಸ್ವಾವಲಂಬನೆ: ಸರ್ಕಾರವು ಈ ಯೋಜನೆ ಸಮರ್ಪಕ ಅನುಷ್ಠಾನ ಮೂಲಕ ಕೆಪಿಟಿಸಿಎಲ್ ರಾಜ್ಯದಲ್ಲಿ ಗ್ರೀನ್ ಎನರ್ಜಿ ಕಾರಿಡಾರ್ ರಚಿಸಲು ಯೋಜನೆ ರೂಪಿಸಿದೆ. ಇದು ಅಸಾಂಪ್ರದಾಯಿಕ ಇಂಧನಗಳಾದ ಸೌರಶಕ್ತಿ ಮತ್ತು ಪವನ ಶಕ್ತಿ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ 1,036 ಕೋಟಿ ರೂ. ವೆಚ್ಚ ಮಾಡುತ್ತಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಜಿಲ್ಲೆಯು ವಿದ್ಯುತ್ ಉತ್ಪಾದನೆ ಸ್ವಾವಲಂಬನೆ ಸಾಧಿಸಲು ಪ್ರಮುಖ ಪಾತ್ರ ವಹಿಸಲಿದೆ.

ಏಳು ಸ್ಥಳಗಳಲ್ಲಿ ಹೊಸ ಸಬ್‌ಸ್ಟೇಷನ್: ಗ್ರೀನ್ ಫೀಲ್ಡ್ ಯೋಜನೆಯಡಿ ಆಯ್ಕೆಗೊಂಡಿರುವ ಸ್ಥಳಗಳಲ್ಲಿ ಹೊಸ 110 ಕೆವಿ ವಿದ್ಯುತ್ ಸಬ್‌ಸ್ಟೇಷನ್‌ಗಳು ಸ್ಥಾಪನೆಗೊಳ್ಳಲಿವೆ. ಅಲ್ಲದೆ, ಜಿಲ್ಲೆಯ ಈ ಎಂಟು ಸ್ಥಳಗಳಲ್ಲಿ ಪವನ ಮತ್ತು ಸೌರ ವಿದ್ಯುತ್ ಯೋಜನೆಗಳನ್ನು ಸ್ಥಾಪನೆಗೊಳ್ಳಲಿವೆ. ಈ ಯೋಜನೆಯಡಿಯಲ್ಲಿ ಹೆಸ್ಕಾಂ ಆವರಣದಲ್ಲಿ ಸೌರಶಕ್ತಿಯ ಮೂಲಕ ವಿದ್ಯುತ್ ಉತ್ಪಾದಿಸಲಾಗುವುದು. ಹೊಸ ಸಬ್‌ಸ್ಟೇಷನ್‌ಗಳ ನಿರ್ಮಾಣದ ನಂತರ ಅಸ್ತಿತ್ವದಲ್ಲಿರುವ ಸಬ್‌ಸ್ಟೇಷನ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ನೀರಾವರಿ ಪ್ರದೇಶ ಭಾಗಗದಲ್ಲಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

ಹೊಸ ಯೋಜನೆಯಡಿಯಲ್ಲಿ ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ. ಈ ಎಂಟು ವಿದ್ಯುತ್ ಉಪಕೇಂದ್ರಗಳಲ್ಲಿ ಸವದತ್ತಿ ತಾಲೂಕಿನ ಮುರಗೋಡದಲ್ಲಿ ಪ್ರಸ್ತುತ 33/11 ಕೆವಿ ಸಾಮರ್ಥ್ಯದ ಸಬ್‌ಸ್ಟೇಷನ್ ಇದ್ದು, ಹೊಸ ಗ್ರೀನ್ ಫೀಲ್ಡ್ ಯೋಜನೆಯ ಮೂಲಕ ಆ ಸಬ್‌ಸ್ಟೇಷನ್‌ನ ಸಾಮರ್ಥ್ಯವನ್ನು 110 ಕೆವಿ ಗೆ ಹೆಚ್ಚಳವಾಗಲಿದೆ. ನಿಪ್ಪಾಣಿ ಅಪ್ಪಾಚಿವಾಡಿ ಸೇರಿದಂತೆ ಉಳಿದ ಏಳು ಸ್ಥಳಗಳಲ್ಲಿ ಹೊಸ ಸಬ್‌ಸ್ಟೇಷನ್‌ಗಳನ್ನು ಸ್ಥಾಪನೆಗೊಳ್ಳಲಿವೆ. ಇದಕ್ಕಾಗಿ ಪ್ರತ್ಯೇಕವಾಗಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net