ಐಕ್ಯತೆಯಿದ್ದರೆ ಸಮುದಾಯಕ್ಕೆ ಶಕ್ತಿ ; ಮಾಜಿ ಸಂಸದ ಮುದ್ದಹನುಮೇಗೌಡ ಹೇಳಿಕೆ

DSC_0008
Published on

ತುಮಕೂರು : ಉಪಪಂಗಡಗಳ ಮೂಲಕ ಹಂಚಿಹೋಗಿರುವ ಒಕ್ಕಲಿಗ ಸಮುದಾಯ ಐಕ್ಯತೆಯಿಂದ ಹೋದರೆ ಹೆಚ್ಚಿನ ಶಕ್ತಿ ಬರಲಿದೆ, ಸರ್ಪ ಒಕ್ಕಲಿಗರು ತಮ್ಮ ಶಕ್ತಿಗೆ ಅನುಸಾರವಾಗಿ ಸುಸಜ್ಜಿತ ಹಾಸ್ಟೆಲ್ ನಿರ್ಮಿಸಿದ್ದು, ತುಮಕೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ಚದುರಿದಂತೆ ಇರುವ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ ಎಂದು ಮಾಜಿ ಸಂಸದ ಮುದ್ದಹನುಮೇಗೌಡ ಹೇಳಿದರು.

ನಗರದ ಉಪ್ಪಾರಹಳ್ಳಿ-ಗೆದ್ದಲಹಳ್ಳಿ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ಸರ್ಪ ಒಕ್ಕಲಿಗ/ಸಲುಪರು ಸಂಘದ ವಿದ್ಯಾರ್ಥಿನಿಲಯವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣಪುಟ್ಟ ಸಮುದಾಯಗಳು ಸಂಘಟಿತರಾಗಿ ಶೈಕ್ಷಣಿಕವಾಗಿ ಮಕ್ಕಳಿಗೆ ಸಹಾಯವಾಗುವಂತ ಕೆಲಸ ಮಾಡಬೇಕು, ನಿಟ್ಟಿನಲ್ಲಿ ಸರ್ಪಒಕ್ಕಲಿಗ ಸಮುದಾಯ ಸುಸಜ್ಜಿತ ಹಾಸ್ಟೆಲ್ ನಿರ್ಮಿಸಿರುವುದು ಮಾದರಿ ಎಂದರು.

ತುಮಕೂರು ನಗರದಲ್ಲಿ ಸಮುದಾಯದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗುವ ಸಾರ್ಥಕ ಕೆಲಸವಾಗಿದೆ, ಮಕ್ಕಳು ಸದುಪಯೋಗ ಪಡೆಯಬೇಕು. ಸಣ್ಣಪುಟ್ಟ ಸಮುದಾಯಗಳು ಜನರಿಂದ ದೇಣಿಗೆ ಸಂಗ್ರಹಿಸಿ ಹಾಸ್ಟೆಲ್, ಸಮುದಾಯ ಭವನ ನಿರ್ಮಿಸುವ ಶಕ್ತಿ ಇರುವುದಿಲ್ಲ. ಹಾಗಾಗಿ, ಸರ್ಕಾರದಿಂದ ಹೆಚ್ಚಿನ ಅನುದಾನ ತರಬೇಕು, ಇದಕ್ಕೆ ಜನಪ್ರತಿನಿಧಿಗಳನ್ನು ಬಳಸಿಕೊಳ್ಳಬೇಕು, ನಾನು ಸಂಸದನಾಗಿದ್ದಾಗ ಸರ್ಕಾರದಿಂದ 50 ಲಕ್ಷ ರೂ. ಕೊಡಿಸಿದ್ದು ಕಟ್ಟಡ ನೋಡಿದಾಗ ಸಾರ್ಥಕ ಎನಿಸಿದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಶ್ರೀಮಂಗಳನಾಥ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಜ್ಞಾನ ನೀಡುವ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯ ಹೆಚ್ಚಾಗಿ ತೊಡಗಿಕೊಳ್ಳಬೇಕು, ಆದಿಚುಂಚನಗಿರಿ ಮಠ ಕೂಡ ಆರಂಭದಲ್ಲಿ ವಿದ್ಯಾದಾನಕ್ಕೆ ಮಹತ್ವ ನೀಡಿದ ನಂತರವೇ ಧಾರ್ಮಿಕ ಕಾರ್ಯಕ್ರಮಕ್ಕೆ ಆದ್ಯತೆ ನೀಡಿದೆ ಎಂದರು. ವಿದ್ಯೆಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮಕ್ಕೆ ಸಮಾಜದ ಸ್ಥಿತಿವಂತರು ಹೆಚ್ಚು ಸಹಾಯ ಮಾಡಬೇಕು, ಎಲ್ಲರೂ ಒಗ್ಗಟ್ಟಾಗಿ ಸಮುದಾಯದ ಏಳ್ಗೆಗೆ ಶ್ರಮಿಸಬೇಕು, ಒಕ್ಕಲಿಗ ಸಮುದಾಯಕ್ಕೆ ಇನ್ನೂ ಹೆಚ್ಚಿನ ಮೀಸಲಾತಿ ದೊರೆಯಬೇಕು, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಸಂಘಟನೆ ಮಾಡುವ ಮೂಲಕ ಸಾಧನೆ ಮಾಡಬೇಕು ಎಂದರು.

ಮಾಜಿ ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿದರು. ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟನಾಯಕನಹಳ್ಳಿ ಗುರಗುಂಡ ಬ್ರಹ್ಮೇಶ್ವರ ಮಠದ ಶ್ರೀನಂಜಾವಧೂತ ಸ್ವಾಮೀಜಿ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಮತ್ತಿತರರು ಭೇಟಿ ನೀಡಿದ್ದರು. ಅಖಿಲ ಕರ್ನಾಟಕ ಸರ್ಪ ಒಕ್ಕಲಿಗ/ಸಲುಪರ ಸಂಘದ ಗೌರವಾಧ್ಯಕ್ಷ ಮುರಗಪ್ಪಗೌಡ, ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ರಾಜಕುಮಾರ್, ಉಪಾಧ್ಯಕ್ಷ ಮಂಜುನಾಥ್ ಇದ್ದರು.

ಯುವಕರು ದುಶ್ಚಟಗಳಿಗೆ ದಾಸರಾಗುವ ಪ್ರವೃತ್ತಿ ಹೆಚ್ಚಾಗುತ್ತಿದೆ, ಈ ಬಗ್ಗೆ ಪಾಲಕರು ಎಚ್ಚರಿಕೆವಹಿಸಬೇಕು. ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವ ಕರ್ತವ್ಯ ಪಾಲಕರ ಮೇಲಿದೆ. ವಿದ್ಯಾರ್ಥಿನಿಲಯಗಳಲ್ಲಿಯೂ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸವಾಗಬೇಕು, ಮಕ್ಕಳು ದೇಶದ ಆಸ್ತಿಯಾಗಬೇಕು, ಹೊರೆಯಾಗಬಾರದು. ಶ್ರೀ ಮಂಗಳನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠ, ಚಿಕ್ಕಬಳ್ಳಾಪುರ ವೀರಶೈವ, ಲಿಂಗಾಯತ ಸಮುದಾಯದ ಏಳ್ಗೆಗೆ ಮಠ ಮಾನ್ಯಗಳು ಮಕ್ಕಳಿಗೆ ಓದಲು ವಸತಿ ಸೌಕರ್ಯ ನೀಡಿದ್ದು, ಸಣ್ಣಪುಟ್ಟ ಸಮುದಾಯಗಳು ವಸತಿನಿಲಯ ಸ್ಥಾಪನೆ ಮಾಡುವುದು ಒಳ್ಳೆಯ ಬೆಳವಣಿಗೆ, ಭವಿಷ್ಯದಲ್ಲಿ ನಿರ್ಮಾಣವಾಗುವ ಕೊಠಡಿಗಳಿಗೆ ಅನುದಾನ ನೀಡುತ್ತೇನೆ. ಜಿ.ಬಿ.ಜ್ಯೋತಿಗಣೇಶ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net