ವಿದ್ಯುತ್ ಕಡಿತ, ಸಂಚಾರ ವ್ಯತ್ಯಯ

tree
ಹೊಸಂಗಡಿ ಅಂಗಡಿಪದವಿನಲ್ಲಿ ಅಂಗಡಿ ಮೇಲೆ ಮರ ಬಿದ್ದಿರುವುದು.
Published on

ಮಂಜೇಶ್ವರ: ತೀವ್ರ ಮಳೆ ಹಾಗೂ ಗಾಳಿಯಿಂದಾಗಿ ಹಲವೆಡೆ ಮರಗಳು ಧರಾಶಾಯಿಯಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬಂದ್ಯೋಡ್ ಬಿ.ಸಿ.ರೋಡ್ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ತಂತಿಗಳಿಗೆ ಹಾನಿಗೊಳಗಾಯಿತು.

ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹೊಸಂಗಡಿ ರೈಲು ಹಳಿಯ ಸಮೀಪ ಮರ ಬಿದ್ದಿದೆ. ಹೊಸಂಗಡಿ ಪಿರಾರಮೂಲೆಯಲ್ಲಿ ಮರ ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಅಂಗಡಿಪದವಿನಲ್ಲಿ ದೈತ್ಯಾಕಾರದ ಮರವೊಂದು ಅಂಗಡಿ ಮೇಲೆ ಬಿದ್ದು ಭಾರಿ ನಷ್ಟ ಉಂಟಾಗಿದೆ.

ಕುಂಬಳೆ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿ ತೆಂಗಿನಮರ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಇಲ್ಲಿಯೂ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಬದಿಯಡ್ಕ-ಚೆರ್ಕಳ ರಸ್ತೆಯ ಬೀಜಂತಡ್ಕ ಮಾಯಿಲಂಕೋಟೆ ತಿರುವಿನಲ್ಲಿ ರಸ್ತೆ ಬದಿಯ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದರಿಂದಾಗಿ ಆ ಭಾಗದಲ್ಲಿ ಅರ್ಧಗಂಟೆ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳೀಯರ ಸಹಾಯದಿಂದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net