

ನರಗುಂದ: ಮೂರು ತಿಂಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಉಪ ನೋಂದಣಾಧಿಕಾರಿ ಕಚೇರಿಗೆ ಹೆಸ್ಕಾಂ ಇಲಾಖೆ ಶುಕ್ರವಾರ ಕೆಲಕಾಲ ಕರೆಂಟ್ ಕಟ್ ಮಾಡಿ ಬಿಸಿ ಮುಟ್ಟಿಸಿದೆ.
ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಮತ್ತು ಭೂಮಿ ವಿಭಾಗ ಕಚೇರಿ ಅಧಿಕಾರಿಗಳು ಮೂರು ತಿಂಗಳಿನಿಂದ ಸುಮಾರು 50 ರಿಂದ 60 ಸಾವಿರ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಹೆಸ್ಕಾಂ ಇಲಾಖೆಯವರು ಶುಕ್ರವಾರ ಕೆಲಸದ ಅವಧಿಯಲ್ಲೇ ಒಂದು ಗಂಟೆ ವಿದ್ಯುತ್ ಸ್ಥಗಿತಗೊಳಿಸಿದರು. ಹೀಗಾಗಿ ಕಚೇರಿಯ ಎಲ್ಲ ಕಾರ್ಯಚಟುವಟಿಕೆ ಸ್ಥಗಿತಗೊಂಡಿದ್ದರಿಂದ ವಿವಿಧ ಕೆಲಸಗಳಿಗಾಗಿ ಬಂದಿದ್ದ ಸಾರ್ವಜನಿಕರು ಕೆಲಕಾಲ ತೊಂದರೆ ಅನುಭವಿಸುವಂತಾಯಿತು.
ತಕ್ಷಣ ಹೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿದ ತಹಸೀಲ್ದಾರ್ ಶ್ರೀಶೈಲ ತಳವಾರ, ‘ಬಿಲ್ ಬಾಕಿ ಸಮಸ್ಯೆ ಪರಿಹರಿಸಲಾಗುತ್ತದೆ. ಈಗ ವಿದ್ಯುತ್ ಪೂರೈಸಿ’ ಎಂದು ಸೂಚಿಸಿದ್ದರಿಂದ ಹೆಸ್ಕಾಂ ಸಿಬ್ಬಂದಿ ಪುನಃ ವಿದ್ಯುತ್ ಸಂಪರ್ಕ ಒದಗಿಸಿದರು.