

ಕುಮಟಾ: ಪಟ್ಟಣದ ಮೂರೂರು ರಸ್ತೆಯಲ್ಲಿರುವ ತಾಲೂಕು ಸೌಧದ ವಿವಿಧ ವಿಭಾಗಗಳಿಂದ ಕಳೆದ ಒಂದು ವರ್ಷದಿಂದ ವಿದ್ಯುತ್ ಬಿಲ್ ಸಂದಾಯ ಮಾಡದ ಹಿನ್ನೆಲೆಯಲ್ಲಿ ಗುರುವಾರ ತಾಲೂಕು ಸೌಧಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ತಾಲೂಕು ಸೌಧದಲ್ಲಿ ಉಪವಿಭಾಗಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ ಸಹಿತ ಕಂದಾಯಕ್ಕೆ ಸಂಬಂಧಿಸಿದ ಹಲವು ವಿಭಾಗಗಳು ಇವೆ. ಎಲ್ಲಾ ಸೇರಿ ಕಳೆದ ಒಂದು ವರ್ಷದಿಂದ ತಾಲೂಕು ಸೌಧದ ವಿದ್ಯುತ್ ಬಿಲ್ 4,13,871 ರೂಪಾಯಿ ಬಾಕಿಯಾಗಿದೆ. ಹೀಗಾಗಿ ಹೆಸ್ಕಾಂ ಎಇಇ ರಾಜೇಶ ಮಡಿವಾಳ ಹಾಗೂ ಇತರ ಅಧಿಕಾರಿಗಳ ತಂಡ ತಾಲೂಕು ಸೌಧಕ್ಕೆ ಬಂದು ವಿವಿಧ ವಿಭಾಗದಲ್ಲಿ ಬಳಕೆಯಾಗಿರುವ ವಿದ್ಯುತ್ ಪರಿಶೀಲನೆ ನಡೆಸಿ ಬಾಕಿ ಉಳಿದಿರುವ ವಿದ್ಯುತ್ ಬಿಲ್ ಬಗ್ಗೆ ವಿವರಿಸಿದ್ದಾರೆ.
ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದರೂ ಕ್ರಮಕೈಗೊಳ್ಳದೇ, ಬಾಕಿ ಜಮಾ ಮಾಡದ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸುವುದಾಗಿ ತಿಳಿಸಿದರು. ಈ ವೇಳೆ ತಾಲೂಕು ಸೌಧದ ಅಧಿಕಾರಿಗಳು ಸಮಯಾವಕಾಶ ಕೋರಿದರು. ತಾಲೂಕು ಸೌಧಕ್ಕೆ ಸಂಬಂಧಿಸಿ ತಹಸೀಲ್ದಾರ್ ಅವರೇ ಜವಾಬ್ದಾರರಾಗಿದ್ದಾರೆ. ಕೂಡಲೇ ವಿದ್ಯುತ್ ಬಿಲ್ ಬಾಕಿ ಜಮಾ ಮಾಡುವಂತೆ ಸೂಚಿಸಿದ ಹೆಸ್ಕಾಂ ಅಧಿಕಾರಿ ಎರಡು ದಿನದ ಅವಕಾಶ ನೀಡಿದರು.