

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಅನಿಯಮಿತ ವಿದ್ಯುತ್ ನಿಲುಗಡೆಯಿಂದ ತೊಂದರೆ.. ಪಡುಪಣಂಬೂರು ಜಂಕ್ಷನ್ ಬಳಿ ಸಂಚಾರಿ ಪೊಲೀಸ್ ನಿಯೋಜಿಸಿ.. ಎಸ್‌ಸಿ, ಎಸ್‌ಟಿಗಳಿಗೆ ಸರ್ಕಾರಿ ನಿವೇಶನ ಮೀಸಲಿಡಿ.. ಇದು ಪಡುಪಣಂಬೂರು ಗ್ರಾಮಸಭೆಯಲ್ಲಿ ಕೇಳಿಬಂದ ಗ್ರಾಮಸ್ಥರ ಆಗ್ರಹ.
ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮಸಭೆ ಆರಂಭವಾಗುತ್ತಲೇ ಗ್ರಾಮಸ್ಥರು, ಮೆಸ್ಕಾಂ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಿದ್ಯುತ್ ಕಡಿತಕ್ಕೆ ಆಕ್ರೋಶ ಹೊರಹಾಕಿದರು. ವಿದ್ಯುತ್ ದರ ಏರಿಸಿದ ಪರಿಣಾಮ ಪಂಚಾಯಿತಿಗೆ ವಿದ್ಯುತ್ ಬಿಲ್ ಸಂದಾಯ ದೊಡ್ಡ ಹೊರೆಯಾಗಿದೆ. ತಿಂಗಳಿಗೆ ಸುವಾರು 1.5 ಲಕ್ಷ ಮೆಸ್ಕಾಂಗೆ ಕಟ್ಟಬೇಕು. ಪಂಚಾಯಿತಿಗಳಿಗೆ ಮೆಸ್ಕಾಂ ರಿಯಾಯಿತಿ ನೀಡಬೇಕೆಂದು ಅಧ್ಯಕ್ಷೆ ಕುಸುವಾ ಚಂದ್ರಶೇಖರ್ ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತನೇ ತೋಕೂರು ನೀರಿನ ಟ್ಯಾಂಕ್ ಬಳಿ ಅಪಾಯಕಾರಿ ಮರ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ನಿವೇಶನ ಗುರುತಿಸಿ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಿಡಬೇಕು ಎಂಬ ಆಗ್ರಹ ಕೇಳಿಬಂತು.
ಪಡುಪಣಂಬೂರು ಅರಮನೆ ಮುಂಭಾಗದ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದರು. ನೋಡಲ್ ಅಧಿಕಾರಿಯಾಗಿ ಶಿಶು ಅಭಿವದ್ಧಿ ಇಲಾಖೆ ಉಪ ಸಹಾಯಕ ಹರೀಶ್ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು. ಪಂಚಾಯಿತಿ ಉಪಾಧ್ಯಕ್ಷ ಹೇಮನಾಥ ಅಮೀನ್, ಮೋಹನ್ ದಾಸ್, ದಿನೇಶ್ ಹೊಸಲಕ್ಕೆ, ಪಿಡಿಒ ಸುಧೀರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಅಪಘಾತಕ್ಕೆ ಕಡಿವಾಣ
ರಾಷ್ಟ್ರೀಯ ಹೆದ್ದಾರಿ ಪಡುಪಣಂಬೂರು ಜಂಕ್ಷನ್ ಬಳಿ ಅನೇಕ ಅಪಘಾತಗಳು ಸಂಭವಿಸಿದ್ದು, ಇಲ್ಲಿ ಸಂಚಾರಿ ಪೊಲೀಸ್ ನೇಮಿಸಿ ಎರ‌್ರಾಬಿರ‌್ರಿ ಸಂಚರಿಸುವ ವಾಹನಗಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಉತ್ತರಿಸಿದ ಪಂಚಾಯಿತಿ ಸದಸ್ಯ ವಿನೋದ್ ಸಾಲ್ಯಾನ್ ಬೆಳ್ಳಾಯರು, ರಾಷ್ಟ್ರೀಯ ಹೆದ್ದಾರಿ ಮೂಲ್ಕಿ ಹಾಗೂ ಪಡುಪಣಂಬೂರು ಬಳಿ ಹೆದ್ದಾರಿ ಸರ್ವೀಸ್ ರಸ್ತೆಗೆ ಮಂಜೂರಾತಿ ದೊರೆತಿದ್ದು, ಶೀಘ್ರ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.