

ಮಡಿಕೇರಿ:
ಪುಟ್ಟ ಜಿಲ್ಲೆ ಕೊಡಗು ವಿದ್ಯುತ್ ಸರಬರಾಜು ವ್ಯವಸ್ಥೆ ವಿಚಾರದಲ್ಲಿ ತುಂಬಾ ಹಿಂದೆ ಇದೆ. ಜಿಲ್ಲೆಯಲ್ಲಿ ೫ ತಾಲೂಕುಗಳಿದ್ದು ವಿದ್ಯುತ್ ಲೋಡ್ ಅಷ್ಟಾಗಿ ಕಾಡುವುದಿಲ್ಲ. ಆದರೂ ಪೂರೈಕೆ ವ್ಯವಸ್ಥೆ ಇನ್ನೂ ಮೇಲ್ದರ್ಜೆಗೆ ಏರದಿರುವುದರಿಂದ ಗ್ರಾಹಕರು ವಿದ್ಯುತ್ ಸಂಬಂಧಿ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಡಳಿತಾತ್ಮಕವಾಗಿಯೂ ಜಿಲ್ಲೆಯಲ್ಲಿ ಸಾಕಷ್ಟು ಬದಲಾವಣೆಯ ಅಗತ್ಯತೆ ಇರುವ ಬಗ್ಗೆಯೂ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಲೆನಾಡಿನ ಕೊಡಗಿನಲ್ಲಿ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಸೆಸ್ಕ್‌ಗೆ ದೊಡ್ಡ ಸವಾಲು. ಪ್ರಸರಣ ವ್ಯವಸ್ಥೆಯೂ ಸಾಕಷ್ಟು ಸುಧಾರಣೆ ಕಾಣಬೇಕಿದೆ. ಕೆಲವೊಂದು ಪ್ರದೇಶ ಹೊರತುಪಡಿಸಿದರೆ ಈಗಲೂ ಹಳೆಯ ಕಾಲದ ತಾಂತ್ರಿಕತೆಯನ್ನೇ ಬಳಸಲಾಗುತ್ತಿದೆ. ಲೋಡ್ ಸಮಸ್ಯೆ ಜಿಲ್ಲೆಯಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ. ಒಂದೇ ವಿದ್ಯುತ್ ಮಾರ್ಗ ಇರುವಲ್ಲಿ ಇಂತಹ ಸಮಸ್ಯೆ ಕೆಲವೊಮ್ಮೆ ವರದಿಯಾಗುತ್ತಿರುತ್ತದೆ.
ಜೂನ್‌ನಿಂದ ಅಕ್ಟೋಬರ್ ತನಕ ಮಳೆಯ ಹೊಡೆತ ವಿದ್ಯುತ್ ಸರಬರಾಜಿನ ಮೇಲೆ ಇನ್ನಿಲ್ಲದ ಪರಿಣಾಮ ಬೀರುತ್ತದೆ. ಸಕಾಲದಲ್ಲಿ ಮಳೆ ಬಾರದಿದ್ದರೆ ನವೆಂಬರ್‌ನಿಂದ ಮೇ ವರೆಗೆ ಕಾಫಿ ತೋಟಗಳಿಗೆ ನೀರು ಹಾಯಿಸಲು ಭಾರಿ ಪ್ರಮಾಣದಲ್ಲಿ ವಿದ್ಯುತ್ ಬೇಕಾಗುತ್ತದೆ. ಈ ವೇಳೆ ಗುಣಮಟ್ಟದ ವಿದ್ಯುತ್ ಪೂರೈಸಲು ಕೆಪಿಟಿಸಿಎಲ್ ಪರದಾಡಬೇಕಾದ ಸ್ಥಿತಿ ಕೊಡಗಿನಲ್ಲಿ ಇದೆ. ಈಗಿರುವ ಪ್ರಸರಣಾ ವ್ಯವಸ್ಥೆ ಸುಧಾರಣೆ ಆಗದ ಹೊರತೂ ಈ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎನ್ನುತ್ತಾರೆ ತಜ್ಞರು.
ಜಿಲ್ಲೆಯಲ್ಲಿ ೧೧ ಕೆವಿಯ ೮೪ ಫೀಡರ್‌ಗಳಿದ್ದು ಈ ಪೈಕಿ ಸುಮಾರು ೨೦ ಫೀಡರ್‌ಗಳಲ್ಲಿ ಸುಧಾರಣೆ ಅವಶ್ಯಕತೆ ಇದೆ ಎಂದು ತಜ್ಞರು ಸಲಹೆ ಕೊಡುತ್ತಾರೆ. ಕೆಲವು ಕಡೆ ಶೇ. ೨೦ಕ್ಕಿಂತಲೂ ಅಧಿಕ ವಿದ್ಯುತ್ ಸೋರಿಕೆ ಆಗುತ್ತಿದೆ. ಕೆಲವು ಫೀಡರ್‌ಗಳಲ್ಲಿ ವೋಲ್ಟೇಜ್ ರೆಗ್ಯುಲೇಷನ್‌ನ ಅಗತ್ಯವಿದೆ. ಇವುಗಳಿಗೆ ಪರಿಹಾರ ಕಂಡುಕೊಂಡರೆ ಜಿಲ್ಲೆಯಲ್ಲಿ ಗುಣಮಟ್ಟದ ವಿದ್ಯುತ್ ನಿರಂತರವಾಗಿ ಸರಬರಾಜು ಮಾಡಬಹುದಾಗಿದೆ.
ವಿರಾಜಪೇಟೆ ಭಾಗಕ್ಕೆ ಈಗ ಪಿರಿಯಪಟ್ಟಣ, ತಿತಿಮತಿ, ಪೊನ್ನಂಪೇಟೆ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದರ ಅಂತರ ಸುಮಾರು ೮೦ ಕಿ.ಮೀ. ಇಷ್ಟು ದೂರಕ್ಕೆ ವಿದ್ಯುತ್ ಕಳುಹಿಸುವಾಗ ಸಹಜವಾಗಿ ಕಡಿಮೆ ಒತ್ತಡದ ವಿದ್ಯುತ್ ಪೂರೈಕೆ ಆಗುತ್ತದೆ. ಇದರ ಬದಲು ಕುಶಾಲನಗರದಿಂದ ಸಿದ್ದಾಪುರ ಮೂಲಕ ವಿರಾಜಪೇಟೆಗೆ ಕೇವಲ ೪೦ ಕಿ.ಮೀ. ಅಂತರದಲ್ಲಿ ವಿದ್ಯುತ್ ಸರಬರಾಜು ಮಾಡಿದರೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ ಎನ್ನುವ ಅಭಿಪ್ರಾಯವೂ ಇದೆ.
ವಿರಾಜಪೇಟೆ (ಮಗ್ಗುಲ) ವಿದ್ಯುತ್ ಉಪಕೇಂದ್ರ ಮಹತ್ವದ ಸ್ಥಾನದಲ್ಲಿದೆ. ಅಮ್ಮತ್ತಿ, ಗೋಣಿಕೊಪ್ಪಲು (ಬಿ.ಶೆಟ್ಟಿಗೇರಿ), ಕೆಎಸ್‌ಆರ್‌ಟಿಸಿ, ಭೇತ್ರಿ, ಅರಪಟ್ಟು, ಪಾಲಂಗಾಲ, ಹೆಗ್ಗಳ, ಕೆಇಬಿ, ಕ್ಲಬ್ ಮಹಿಂದ್ರಾ ಮುಂತಾದ ಫೀಡರ್ ವಾಹಕಗಳಿಗೆ ವಿರಾಜಪೇಟೆ ವಿದ್ಯುತ್ ಉಪಕೇಂದ್ರದಿಂದಲೇ ವಿದ್ಯುತ್ ವಿತರಣೆಯಾಗುತ್ತಿದೆ. ಮೂರ್ನಾಡು ಮತ್ತು ಸಿದ್ಧಾಪುರ ಉಪಕೇಂದ್ರಗಳಿಗೂ ಇಲ್ಲಿಂದ ವಿತರಣೆ ಆಗುತ್ತಿರುವುದು ಹೊರೆಯಾಗಿದೆ.
ವಿರಾಜಪೇಟೆ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳಲ್ಲಿ ಒಂದಾಗಿದ್ದು, ಕೇರಳದ ಮಟ್ಟನೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೊಂಡಿಯು ಆಗಿದೆ. ಮೈಸೂರು, ನಾಗಹೊಳೆ, ತಲಕಾವೇರಿ, ಭಾಗಮಂಡಲ, ಪಾಡಿ ಇಗುತ್ತಪ್ಪ, ನಾಲ್ಕುನಾಡು ಅರಮನೆ, ತಡಿಯಂಡಮೊಳ್‌ಗೂ ಸಮೀಪದ ಕೇಂದ್ರವಾಗಿದ್ದು, ವಾಜಿಜ್ಯ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಹಾಗಾಗಿ ಇಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಸುಮಾರು ೧೭ ಮೆ.ವ್ಯಾ. ಇದೆ. ಈ ಉಪಕೇಂದ್ರದ ನಿರ್ವಹಣೆಯ ಬಗ್ಗೆಯೂ ಆಸಕ್ತಿ ತೋರಿಸಬೇಕಿದೆ.
ಮಡಿಕೇರಿಯಿಂದ ಮೂರ್ನಾಡು ವರೆಗೆ ಮತ್ತು ಸುಂಟಿಕೊಪ್ಪದಿಂದ ಸಿದ್ಧಾಪುರದವರೆಗೆ ೩೩ ಕೆವಿ ವಾಹಕವಿದೆ. ಆದರೆ ಇದರ ಬಳಕೆ ಆಗುತ್ತಿಲ್ಲ. ಇದು ಕೂಡ ಈ ಭಾಗದಲ್ಲಿನ ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ. ವಿದ್ಯುತ್ ಪ್ರಸರಣ ನಿಗಮದ ಈಗಿನ ಪ್ರಸ್ತಾವನೆಯಂತೆ ಕುಶಾಲನಗರದಿಂದ ಸಿದ್ದಾಪುರಕ್ಕೆ ನೇರ ಸಂಪರ್ಕ ( ಎಸ್.ಎಚ್ ೯೧ರಮಾರ್ಗ) ಅನುಷ್ಠಾನಕ್ಕೆ ಬಂದರೆ ಸಿದ್ದಾಪುರ, ಅಮ್ಮತ್ತಿ, ಗೋಣಿಕೊಪ್ಪಲು, ಬಾಳೆಲೆ, ಹುದಿಕೇರಿ, ವಿರಾಜಪೇಟೆ, ಪೊನ್ನಂಪೇಟೆಗೆ ಅನುಕೂಲವಾಗಲಿದೆ.
ಮೂರ್ನಾಡುವಿನಿಂದ ಕಾಂತೂರು - ಮೂರ್ನಾಡು ಪೇಟೆ ಮತ್ತು ಮರಗೋಡು ಅರೆಕಾಡು ಕಟ್ಟೆಮಾಡು ಹೊಸ್ಕೇರಿ ಹುಲಿತಾಳಗಳಿಗೆ ಪೂರೈಕೆ ಆಗುತ್ತಿದ್ದ ಎಫ್ ೩ ಎಂಬ ಫೀಡರ್ ವ್ಯವಸ್ಥೆಯನ್ನು ಮೂರ್ನಾಡು ನಗರ ಮತ್ತು ಗ್ರಾಮಾಂತರ ಎಂದು ಪ್ರತ್ಯೇಕಿಸಿ ಎಫ್ ೩ ಮತ್ತು ಎಫ್-೪ ಎಂದು ವಿಭಾಗಿಸಲು ಮಾಡಿದ ಯೋಜನೆ ಇನ್ನೂ ಪೂರ್ಣವಾಗಿಲ್ಲ. ಮರಗೋಡು ಗ್ರಾಮ ಸಂಕೀರ್ಣ ವ್ಯವಸ್ಥಿತ ಜಾಲಕ್ಕೆ ಮಡಿಕೇರಿ ಗ್ರಾಮಂತರ ವಿದ್ಯುತ್ ಬಳಕೆದಾರರ ವೇದಿಕೆ ಕೋರಿಕೆ ಸಲ್ಲಿಸಿದ್ದು, ಈ ತನಕ ಯೋಜನೆ ತಯಾರಾಗಿಲ್ಲ
ಕಾಫಿ ಬೆಳೆಗಾರರ ಸಂಘಟನೆಗಳು, ರೈತ ಸಂಘಟನೆಗಳು, ಸಾಮಾನ್ಯ ವಿದ್ಯುತ್ ಬಳಕೆದಾರರು ವಿದ್ಯುತ್ ಪ್ರಸರಣಾ ವ್ಯವಸ್ಥೆಯಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಕಾಲ ಕಾಲಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದವರ ಗಮನ ಸೆಳೆಯುತ್ತಾ ಬಂದಿದ್ದಾರೆ. ಈ ಬಗ್ಗೆ ಇಲಾಖೆಯೂ ವಿವಿಧ ಹಂತಗಳಲ್ಲಿ ಸಾಕಷ್ಟು ಪ್ರಯತ್ನ ಪಡುತ್ತಿರುವ ಮಾಹಿತಿ ಇದ್ದರೂ, ನಿರೀಕ್ಷಿತ ವೇಗದಲ್ಲಿ ಕೆಲಸ ನಡೆಯದಿರುವ ಬಗ್ಗೆ ವಿದ್ಯುತ್ ಗ್ರಾಹಕರಲ್ಲಿ ಅಸಮಾಧಾನ ಇದೆ. ಇದೀಗ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನವನ್ನೂ ಸೆಳೆಯಲಾಗಿದ್ದು, ಸಕರಾತ್ಮಕ ಬೆಳವಣಿಗೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಆಡಳಿತಾತ್ಮಕವಾಗಿಯೂ ಇಲಾಖೆಯಲ್ಲಿ ಬದಲಾವಣೆಯ ಅವಶ್ಯಕತೆ ಬಗ್ಗೆ ಗಮನ ಸೆಳೆಯಲಾಗಿದೆ. ಕೊಡಗು ಜಿಲ್ಲೆಯ ಉಸ್ತುವಾರಿಯನ್ನು ದೂರದ ಚಾಮರಾಜನಗರ, ಕೊಳ್ಳೇಗಾಲದ ವೃತ್ತದೊಡನೆ ಸೇರಿದಲಾಗಿದೆ. ಇದರಿಂದಾಗಿ ವ್ಯವಸ್ಥೆಯ ನಿಯಂತ್ರಣ ಕಷ್ಟ ಎನ್ನುವ ಅಭಿಪ್ರಾಯ ಇದೆ. ತ್ವರಿತ ಸ್ಪಂದನೆಯೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೊಡಗಿಗೆ ಪ್ರತ್ಯೇಕ ವೃತ್ತದ ಬೇಡಿಕೆ ಇಡಲಾಗಿದೆ. ವಿರಾಜಪೇಟೆ ಉಪ ವಿಭಾಗಕ್ಕೂ ಮನವಿ ಮಾಡಿಕೊಳ್ಳಲಾಗಿದೆ.
ಮೂರ್ನಾಡುವಿನಲ್ಲಿ ೧.೬೮ ಕಿಮೀ ಉದ್ದದ ೬೬ ಕೆವಿ ಲಿಲೋ ಲೈನ್ ಮತ್ತು ೧೨.೫ ಎಂವಿಎ ೬೬/೧೧ಕೆವಿ ಸ್ಥಾಪನೆ, ಮೂರ್ನಾಡುವಿನಲ್ಲಿ ಟಿಬಿ, ಮೂರ್ನಾಡಿನಿಂದ ಭಾಗಮಂಡಲ (ಪದಕಲ್ಲು) ವರೆಗಿನ ೩೦ ಕಿಮೀ ಎಸ್‌ಸಿ ಲೈನ್, ಪದಕಲ್ಲುವಿನಲ್ಲಿ ೧೨.೫ ಎಂವಿಎ ೬೬/೧೧ ಕೆವಿ ಸಬ್‌ಸ್ಟೇಷನ್ ಸ್ಥಾಪನೆ, ಮಡಿಕೇರಿಯಲ್ಲಿ ಸಂಪಾಜೆ ಲೈನ್‌ಗೆ ಟಿಬಿ, ಮಡಿಕೇರಿಯಿಂದ ಕಗ್ಗೋಡ್ಲು, ಮದೆನಾಡು ಮೂಲಕ ಸಂಪಾಜೆಗೆ ೩೨.೦೮೫ ಕಿಮೀ ೬೬ ಕೆವಿ ಸರ್ಕ್ಯೂಟ್ ಕೊಡಗಿಗೆ ತುರ್ತು ಅಗತ್ಯವಿದೆ.
ರತನ್ ಬಾಬು ಕೆ.ಬಿ., ನಿವೃತ್ತ ಅಧೀಕ್ಷಕ ಅಭಿಯಂತರ, ಕೆಪಿಟಿಸಿಎಲ್
ಮಡಿಕೇರಿ ತಾಲೂಕು ಮೂರ್ನಾಡು ಗ್ರಾಮದಲ್ಲಿ ೩೩/೧೧ ಕೆ.ವಿ. ಉಪಕೇಂದ್ರವನ್ನು ೬೬/೧೧ ಕೆ.ವಿ ವಿದ್ಯುತ್ ವಿದ್ಯುತ್ ಉಪಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ರೂ. ೧೩.೭೪ ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಯ ವಿಸ್ತತಾ ಯೋಜನಾ ವರದಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ೨೦೨೩ರ ಮಾ. ೨೧ ರಂದು ಅನುಮೋದನೆಗೊಂಡಿದ್ದು, ಟೆಂಡರ್ ಕರೆಯುವ
ಹಂತದಲ್ಲಿರುತ್ತದೆ. ಭಾಗಮಂಡಲ (ಪದಕಲ್ಲು)ದಲ್ಲಿ ೬೬/೧೧ ಕೆ.ವಿ ವಿದ್ಯುತ್ ಉಪಕೇಂದ್ರ ಸ್ಥಾಪಿಸುವ ಪ್ರಸ್ತಾವನೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ತಾಂತ್ರಿಕ ಸಮನ್ವಯ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡಿದೆ. ಇದಕ್ಕಾಗಿ ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿ ಪದಕಲ್ಲು ಗ್ರಾಮದಲ್ಲಿ ಒಟ್ಟು ೩ ಎಕರೆ ಜಮೀನು ಕ.ವಿ.ಪ್ರ..ನಿ.ನಿಯಮಿತದ ಸ್ವಾಧೀನಕ್ಕೆ ಪಡೆಯಲಾಗಿದೆ.
ಕೆ.ಜೆ. ಜಾರ್ಜ್, ಇಂಧನ ಸಚಿವ