

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿದ್ದರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ. ಅದು ಸರಿಯಾದ ಜಾಗವೂ ಅಲ್ಲ ಎನ್ನುವ ಮೂಲಕ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ರಾಮ ಮಂದಿರ ಕಟ್ಟಲಾಗಿದೆ. ಅದು 40 ಪಸೆರ್ಂಟ್ ಕಟ್ಟಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ. ಸುಪ್ರೀಂಕೋರ್ಟ್ ಹೇಳಿರುವ ಜಾಗದಲ್ಲಿ ಮಂದಿರ ನಿರ್ಮಾಣವಾಗಿಲ್ಲ. ಬೇರೆ ಜಾಗದಲ್ಲಿ ಕಟ್ಟಿದ್ದಾರೆ ಎಂದು ದೂರಿದ್ದಾರೆ.
ದೇಶದಲ್ಲಿ 10 ವರ್ಷದಿಂದ ಸರ್ವಾಧಿಕಾರಿ ಧೋರಣೆ ಇದೆ. ಏನೇ ಉದ್ಘಾಟನೆ ಆದರೂ ಮೋದಿ ಒಬ್ಬರೇ ಮಾಡುತ್ತಿದ್ದಾರೆ. ದೇಶ ಹಳ್ಳ ಹಿಡಿದು ಹೋಗಿದೆ. ಬಡವರಿಗೆ ಅನುಕೂಲವಾಗುವ ಒಂದೂ ಕಾರ್ಯಕ್ರಮವೂ ಇಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಆಗಿದೆಯಾ? ಚುನಾವಣೆ ಬಂದಾಗ ಒಂದು ಅಜೆಂಡಾ ಸೆಟ್ ಮಾಡುತ್ತಿದ್ದಾರೆ. ಅಧಿಕಾರ ಇದೆಯೆಂದು ದುರುಪಯೋಗ ಮಾಡಬಾರದು. ರಾಮ, ರಹೀಮ, ಪಾಕಿಸ್ತಾನ, ಅಪಘಾನಿಸ್ತಾನ ಹೆಸರು ಹೇಳುವ ಮೂಲಕ ಜನರನ್ನು ಹುಚ್ಚು ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಮಾತನಾಡಿದರು. ಈಗ ಕೇವಲ ರಾಮಮಂದಿರದ ಹೆಸರು ಹೇಳಿ ಮತ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ನಿತೀಶಕುಮಾರ, ಸೋತ ಕಮಲನಾಥ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿಯವರಿಂದ ಯಾವ ಹಿಂದುಗಳಿಗೂ ಲಾಭ ಆಗಿಲ್ಲ. ಇದಕ್ಕೆಲ್ಲ ಅಂತ್ಯ ಇದೆ. ದೇವರೂ ಇದ್ದಾನೆ. ಬಿಜೆಪಿ ಏನೂ ಮಾಡಿಲ್ಲ. ಗ್ಯಾರಂಟಿ ನೋಡಿ ಮತ ಹಾಕಿದರೆ ಬಿಜೆಪಿಯವರು ಗೆಲ್ಲಲು ಸಾಧ್ಯವಿಲ್ಲ. ಇದನ್ನು ಮರೆ ಮಾಚಲು ರಾಮ, ರಹೀಮ ಎಂದು ಬರುತ್ತಿದ್ದಾರೆ. ಅಭಿವೃದ್ಧಿ ವಿಚಾರವಾಗಿ ಹೋದರೆ ಬಿಜೆಪಿ ಗೆಲ್ಲಲ್ಲ. ಬರುವ 100 ದಿನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ಜನರಿಗೆ ಮೋಸ ಮಾಡಿ ಮತ ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ದೇಶ ಸಾಲದಲ್ಲಿ ಮುಳುಗಿ ಹೋಗಿದೆ. ಮೋದಿ ಅವರು ಗುಜರಾತ ಮುಖ್ಯಮಂತ್ರಿ ಇದ್ದಾಗ ಮಾತನಾಡಿದ್ದ ವಿಡಿಯೋ ಇದೆ. ಅದನ್ನು ಬಿಜೆಪಿಯವರು ನೋಡಬೇಕು. ನಾವು ನಮ್ಮ ಪಾಲಿನ ತೆರಿಗೆ ಹಣ ಕೇಳಿದರೆ ಸುಳ್ಳು ರಾಮಯ್ಯ ಎನ್ನುತ್ತಿದ್ದಾರೆ. ಇವರು 10 ವರ್ಷದಲ್ಲಿ ಏನು ಮಾಡಿದ್ದಾರೆ? ಮೇಕ್ ಇನ್ ಇಂಡಿಯಾ, ರೈತರ ಆದಾಯ ದುಪ್ಪಟ್ಟು, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಮಾತನಾಡಿದರು. ಏನು ಮಾಡಿದ್ದಾರೆ ಎಂದು ಅವರೇ ಚರ್ಚೆಗೆ ಬಂದು ಮಾತನಾಡಲಿ. ನಿರ್ಮಲಾ ಸೀತಾರಾಮನ್ 3 ಕೋಟಿ ಮನೆ ನಿರ್ಮಾಣವೆಂದರೆ, ಮೋದಿ ಅವರು ನಾಲ್ಕು ಕೋಟಿ ಮನೆ ನಿರ್ಮಾಣ ಎನ್ನುತ್ತಿದ್ದಾರೆ. ಕಾಂಟ್ರವರ್ಸಿ ಬಗ್ಗೆ ಮಾತನಾಡದೇ ಅಭಿವೃದ್ಧಿ ಬಗ್ಗೆ ಮಾತನಾಡಲಿ. ನಾವು ಚರ್ಚೆಗೆ ಸಿದ್ಧ ಎಂದ ಅವರು, ನನಗೆ ಲೋಕಸಭೆ ಚುನಾವಣೆಗೆ ನಿಲ್ಲಲು ಮನಸ್ಸಿಲ್ಲ. ಆಸಕ್ತಿಯೂ ಇಲ್ಲ ಎಂದರು.